ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ನೀತಿ ಸಂಹಿತೆ ಮಂಗಳವಾರದಿಂದಲೇ ಜಾರಿಯಾಗಿದೆ. ಮತದಾರರಿಗೆ ಆಮಿಷ ಒಡ್ಡುವುದನ್ನು ತಡೆಗಟ್ಟುವ ಸಲುವಾಗಿ ಗಡಿ ಭಾಗದಲ್ಲಿ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಲಾಗಿದ್ದು, ವ್ಯಾಪಕ ತಪಾಸಣೆ ಕಾರ್ಯ ಕೈಗೊಳ್ಳಲಾಗಿದೆ.
ಇದರ ಬಿಸಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ತಟ್ಟಿದ್ದು, ಘಾಟಿ ಸುಬ್ರಮಣ್ಯ ದೇಗುಲಕ್ಕೆ ತೆರಳುವಾಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ವ್ಯಾಪ್ತಿಯ ಚೆಕ್ ಪೋಸ್ಟ್ ನಲ್ಲಿ ಅವರ ಕಾರನ್ನು ತಡೆಗಟ್ಟಿದ ಪೊಲೀಸರು ತಪಾಸಣೆ ನಡೆಸಿದ್ದಾರೆ.
ತಪಾಸಣೆ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾರನ್ನು ಪೊಲೀಸರು ಕಳುಹಿಸಿಕೊಟ್ಟಿದ್ದಾರೆ. ರಾಜ್ಯದಲ್ಲಿ ಮೇ 10 ರಂದು ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದ್ದು, ಮೇ 13 ರಂದು ಫಲಿತಾಂಶ ಹೊರ ಬೀಳಲಿದೆ. ಅಲ್ಲಿಯವರೆಗೂ ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸಲಾಗುತ್ತದೆ.