ಅತಿ ಹೆಚ್ಚು ಜನಸಂಖ್ಯೆ ಹೊಂದಿದ ರಾಷ್ಟ್ರವೆಂಬ ಖ್ಯಾತಿ ಚೀನಾಕ್ಕಿತ್ತು. ಆದರೆ ತಜ್ಞರ ಪ್ರಕಾರ ಈಗಾಗ್ಲೇ ಭಾರತ ಚೀನಾವನ್ನು ಹಿಂದಿಕ್ಕಿದೆ. ಪರಿಣಾಮ ಪ್ರಧಾನಿ ಮೋದಿ ಏರುತ್ತಲೇ ಇರುವ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಉದ್ಯೋಗ ಸೃಷ್ಟಿಗೆ ಮುಂದಾಗಬೇಕು ಎನ್ನುತ್ತಿದ್ದಾರೆ ವಿಶ್ಲೇಷಕರು.
ವಿಶ್ವ ಜನಸಂಖ್ಯಾ ರಿವ್ಯೂ ಪ್ರಕಾರ ಭಾರತ ಅತಿಹೆಚ್ಚು ಜನಸಂಖ್ಯೆ ಹೊಂದಿದ ರಾಷ್ಟ್ರವೆನಿಸಿಕೊಂಡಿದ್ದ ಚೀನಾವನ್ನು ಈಗಾಗ್ಲೇ ಹಿಂದಿಕ್ಕಿದೆ. ಈ ಗಣತಿಯ ಪ್ರಕಾರ 2022ರ ಅಂತ್ಯದ ವೇಳೆಗೆ ಭಾರತದ ಜನಸಂಖ್ಯೆ 140 ಕೋಟಿ ದಾಟಿತ್ತು.
ಇದು ಚೀನಾದ ಜನಸಂಖ್ಯೆಗಿಂತ 50 ಲಕ್ಷದಷ್ಟು ಹೆಚ್ಚಾಗಿದೆ. ಪ್ರಸ್ತುತ ದೇಶದ ಜನಸಂಖ್ಯೆ 1.412 ಬಿಲಿಯನ್ ಎಂದು ಚೀನಾ ಹೇಳಿಕೊಂಡಿದೆ. 1961ರ ಬಳಿಕ ಅಂದರೆ ಚೀನಾ ಸ್ವಾತಂತ್ರ್ಯ ಪಡೆದ ನಂತರ ಇದೇ ಮೊದಲ ಬಾರಿಗೆ ಅಲ್ಲಿನ ಜನಸಂಖ್ಯೆಯಲ್ಲಿ ಕುಸಿತ ದಾಖಲಾಗಿದೆ. ತಜ್ಞರ ಪ್ರಕಾರ ಭಾರತ ವಿಶ್ವದ ಅತ್ಯುತ್ತಮ ಆರ್ಥಿಕತೆ ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗುವತ್ತ ದಾಪುಗಾಲಿಟ್ಟಿದೆ.
ಆದರೆ ಹೆಚ್ಚುತ್ತಿರುವ ಯುವ ಜನಸಂಖ್ಯೆಯ ಲಾಭ ಪಡೆಯಲು ಕೇಂದ್ರ ಸರ್ಕಾರ ಅದಕ್ಕೆ ತಕ್ಕಂತಹ ಯೋಜನೆಗಳನ್ನು ರೂಪಿಸುವ ಅಗತ್ಯವನ್ನು ತಜ್ಞರು ಒತ್ತಿ ಹೇಳಿದ್ದಾರೆ. ದೇಶ ಕೃಷಿಗೆ ಸಂಬಂಧಿಸಿದ ಉದ್ಯೋಗಗಳಿಂದ ದೂರ ಸರಿಯುತ್ತಿರುವುದು ಕೂಡ ಕಳವಳಕಾರಿ.
ಈ ವರ್ಷಾಂತ್ಯಕ್ಕೆ ಜನಸಂಖ್ಯೆಯಲ್ಲಿ ಭಾರತ ಚೀನಾವನ್ನು ಹಿಂದಿಕ್ಕಲಿದೆ ಎಂದು ವಿಶ್ವಸಂಸ್ಥೆ ಹೇಳಿತ್ತು. ಸಮೀಕ್ಷೆ ಪ್ರಕಾರ 2050ರ ವೇಳೆಗೆ ಭಾರತದ ಜನಸಂಖ್ಯೆ 1.668 ಬಿಲಿಯನ್‌ಗೆ ತಲುಪಲಿದೆ. ಆದರೆ ಚೀನಾದ ಜನಸಂಖ್ಯೆ 1.317 ಬಿಲಿಯನ್‌ನಷ್ಟಿರಲಿದೆ. 2023ರ ಜನವರಿ 18ರ ವೇಳೆಗೆ ಭಾರತದ ಜನಸಂಖ್ಯೆ 1.423 ಬಿಲಿಯನ್ ದಾಟಿದೆ.