ಹಾವೇರಿ: ಮೀಸಲಾತಿ ವಿಚಾರವಾಗಿ ಶ್ರೀಗಳಿಗೆ ಫೋನ್ ಮಾಡಿ ಒತ್ತಡ ಹಾಕಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಕ್ಕೆ, ನಾನು ಒತ್ತಡ ಹಾಕುವ ಕೆಲಸ ಮಾಡಿಲ್ಲ. ಬೇಕಾದರೆ ಪ್ರಮಾಣ ಮಾಡಿ ಹೇಳುತ್ತೇನೆ ಎಂದು ಗುಡುಗಿದ್ದಾರೆ.
ಹಾವೇರಿಯ ಶಿಗ್ಗಾವಿಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ನಾನು ಯಾವ ಸ್ವಾಮೀಜಿಗಳಿಗೂ ಕರೆ ಮಾಡಿ ಒತ್ತಡ ಹಾಕಿಲ್ಲ, ಅಂತಹ ಕೆಲಸ ಮಾಡುವುದೂ ಇಲ್ಲ. ಇಂತಹ ಆರೋಪ ಯಾರು ಮಾಡಿದ್ದಾರೋ ಅವರಿಗೆ ಬಿಡುತ್ತೇನೆ. ಸ್ವಾಮೀಜಿಗಳು ಸರ್ವಸಂಗ ಪರಿತ್ಯಾಗಿಗಳು, ಗುರುಗಳ ಸ್ಥಾನದಲ್ಲಿ ಇರುವವರು. ಅವರಿಗೆ ಸ್ವಂತ ಯೋಚನೆ ಬದ್ಧತೆಗಳಿವೆ. ಯಾರದೋ ಒತ್ತಡಕ್ಕೆ ಮಣಿಯುವ ಅವಶ್ಯಕತೆ ಅವರಿಗಿಲ್ಲ. ನನ್ನ ವಿರುದ್ಧ ಯಾರು ಆರೋಪ ಮಾಡಿದ್ದಾರೋ ವಿಪಕ್ಷದ ಅಧ್ಯಕ್ಷರು ಅವರು ಈ ಹಿಂದೆ ಶ್ರೀಗಳಿಗೆ ಒತ್ತಡ ಹಾಕಿದ್ದರು. ಮೀಸಲಾತಿ ಘೋಷಿಸಿದರೆ ಒಪ್ಪಬೇಡಿ ಎಂದು. ಈಗ ನಮ್ಮ ವಿರುದ್ಧ ಹೇಳಿಕೆ ಕೊಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಹಲವು ವಿಚಾರ ಬಂದಾಗ ಎಲ್ಲವನ್ನೂ ಬಹಿರಂಗಪಡಿಸಲು ಆಗಲ್ಲ. ವಚನಾನಂದ ಸ್ವಾಮೀಜಿ ಸೈದ್ಧಾಂತಿಕವಾಗಿ ಸಹಕಾರ ನೀಡಿದ್ದಾರೆ. ಮೀಸಲಾತಿಗಾಗಿ ಜಯಮೃತ್ಯುಂಜಯ ಶ್ರೀಗಳು ಹೋರಾಟ ಮಾಡಿದ್ದಾರೆ. ಶ್ರೀಗಳ ಹೋರಾಟವೂ ಮೀಸಲಾತಿ ಹೆಚ್ಚಳಕ್ಕೆ ಕಾರಣವಾಯಿತು ಎಂದು ಹೇಳಿದರು.