ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪಿಸಿದ್ದಾರೆ. ಅಲ್ಲದೆ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ವತಿಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಘೋಷಣೆ ಮಾಡಿದ್ದಾರೆ.
ಜನಾರ್ದನ ರೆಡ್ಡಿ ಹಾಗೂ ಅವರ ಪತ್ನಿ ಅರುಣಾಲಕ್ಷ್ಮಿ ಕೂಡಾ ಈ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇದ್ದು, ಇದರ ಮಧ್ಯೆ ಜನಾರ್ದನ ರೆಡ್ಡಿ ಅವರ ಹೊಸ ಪಕ್ಷ ಸ್ಥಾಪನೆಗೆ ಅವರ ಸಹೋದರ ಸೋಮಶೇಖರ್ ರೆಡ್ಡಿ ಅವರೇ ಅಪಸ್ವರ ಎತ್ತಿದ್ದಾರೆ.
ಬಳ್ಳಾರಿಯಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ಬೆಳೆಯಲು ತಾಳ್ಮೆ ಇರಬೇಕಾಗುತ್ತದೆ. ಆದರೆ ನನ್ನ ಸಹೋದರ ಜನಾರ್ದನ ರೆಡ್ಡಿಯವರು ದುಡುಕಿ ಹೊಸ ಪಕ್ಷ ಸ್ಥಾಪಿಸಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ನಗರ ಕ್ಷೇತ್ರದಿಂದ ಜನಾರ್ದನ ರೆಡ್ಡಿ ಅಥವಾ ಅರುಣಾಲಕ್ಷ್ಮಿಯವರು ಕಣಕ್ಕಿಳಿದರೂ ಸಹ ಬಿಜೆಪಿ ಅಭ್ಯರ್ಥಿಯಾಗಿ ನಾನೇ ಸ್ಪರ್ಧಿಸುತ್ತೇನೆ ಎಂದು ಶಾಸಕ ಸೋಮಶೇಖರ ರೆಡ್ಡಿ ತಿಳಿಸಿದ್ದಾರೆ.