ಬೆಂಗಳೂರು: ಐಪಿಎಸ್ ಅಧಿಕಾರಿ ಡಿ. ರೂಪಾ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಕಿತ್ತಾಟ ಪ್ರಕರಣ ಇದೀಗ ಕೋರ್ಟ್ ಮೆಟ್ಟಿಲೇರಿದ್ದು, ಡಿ. ರೂಪಾ ವಿರುದ್ಧ ರೋಹಿಣಿ ಸಿಂಧೂರಿ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಸಿವಿಲ್ ಸರ್ವಿಸ್ ನಿಯಮಾವಳಿ ಪ್ರಕಾರ ದೂರು ನೀಡಿದ್ದಾಗಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ. ರೂಪಾ ಮೌದ್ಗಿಲ್ ವಿರುದ್ಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸರಿಗೂ ದೂರು ನೀಡಿದ್ದೇನೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಸೂಚನೆಯನ್ನೂ ರೂಪಾ ಪಾಲಿಸುತ್ತಿಲ್ಲ. ಸರ್ಕಾರದ ಸುತ್ತೋಲೆಯನ್ನೂ ಧಿಕ್ಕರಿಸಿ ಮಾಧ್ಯಮಗಳ ಮುಂದೆ ಹೇಳಿಕೆ ಕೊಟ್ಟಿದ್ದಾರೆ ಎಂದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಖಾಸಗಿ ಫೋಟೋ, ಫೋನ್ ನಂಬರ್ ನ್ನು ಪ್ರಕಟಿಸಿದ್ದು, ನೂರಾರು ಅಪರಿಚಿತ ಕರೆಗಳು ಬರುತ್ತಿವೆ. ರೂಪಾ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ರೂಪಾ ಮೌದ್ಗಿಲ್ ಅವರಿಗೆ ನಿರ್ಬಂಧಿಸುವಂತೆ ಮನವಿ ಮಾಡಿದ್ದಾರೆ.