ಬೆಂಗಳೂರು: ಕೇಂದ್ರ ಬಜೆಟ್ ಎಲ್ಲಾ ವರ್ಗದವರಿಗೂ ಅನುಕೂಲವಾಗುವಂತಹ, ಸರ್ವವ್ಯಾಪಿ ಸರ್ವಸ್ಪರ್ಶಿ ಬಜೆಟ್ ಆಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿಎಂ ಬೊಮ್ಮಾಯಿ, ಬಜೆಟ್ ನಲ್ಲಿ ಮೂಲಸೌಕರ್ಯಕ್ಕೆ ಹೆಚ್ಚು ಒತ್ತು ನೀಡಿರುವುದು ಸಂತಸದ ವಿಚಾರ. ಭದ್ರಾಮೇಲ್ದಂಡೆ ಯೋಜನೆಗೆ 5,300 ಕೋಟಿಯಷ್ಟು ಅನುದಾನ ಘೋಷಣೆ ಮಾಡಿದ್ದಾರೆ. ಇಷ್ಟೊಂದು ದೊಡ್ದ ಪ್ರಮಾಣದಲ್ಲಿ ಒಂದು ಯೋಜನೆಗೆ ಅನುದಾನ ಸಿಕ್ಕಿರುವುದು ಇದೇ ಮೊದಲು. ಆದರೂ ವಿಪಕ್ಷಗಳು ಹತಾಶರಾಗಿ ಏನೇನೋ ಮಾತನಾಡುತ್ತಿದ್ದಾರೆ ಎಂದರು.
ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದ ಆರ್ಥಿಕ ಸ್ಥಿತಿ ಚೆನ್ನಾಗಿದೆ. ನಮ್ಮ ದೇಶದ ಹಣಕಾಸು ಪರಿಸ್ಥಿತಿ ಭದ್ರ ಬುನಾದಿಯ ಮೇಲೆ ನಿಂತಿದೆ. ಜಿಡಿಪಿ ಆರೋಗ್ಯಕರವಾಗಿದೆ ಎಂದು ಅರ್ಥೈಸಿಕೊಳ್ಳಬೇಕು. ಭಾರತದ ಆರ್ಥಿಕ ಸ್ಥಿತಿ ಶೇ.6.8ರಷ್ಟಿದೆ ಎಂದು ಹೇಳಿದರು.
ಕೇಂದ್ರದ ಬಜೆಟ್ ದೇಶದ ಅಭಿವೃದ್ಧಿಗೆ ಪೂರಕವಾಗಿದೆ. ಜಲಜೀವನ್ ಯೋಜನೆಗೆ ಹೆಚ್ಚಿನ ಅನುದಾನ ನೀಡಿದ್ದಾರೆ. ಪ್ರತಿ ಮನೆಗೂ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಬಜೆಟ್ ನಲ್ಲಿ ಎಂಎಸ್ ಎಂಇ ಸಾಲದ ಮೊತ್ತ 75 ಲಕ್ಷದಿಂದ 3 ಕೋಟಿ ಹೆಚ್ಚಳ ಮಾಡಲಾಗಿದೆ. ಸಾಲದ ಬಡ್ಡಿ ಪ್ರಮಾಣ ಶೇ.1ರಷ್ಟು ಕಡಿಮೆ ಮಾಡಿದ್ದಾರೆ. ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ. ಕೃಷಿ ಕ್ಷೇತ್ರಕ್ಕೆ 1 ಲಕ್ಷ ಕೋಟಿ ಅನುದಾನ ಮೀಸಲಿಡಲಾಗಿದೆ. ಕೃಷಿ ರಾಜ್ಯ ಪಟ್ಟಿಯಲ್ಲಿದ್ದರೂ ಹೆಚ್ಚಿನ ಅನುದಾನ ನೀಡಿದ್ದಾರೆ. ದೊಡ್ಡ ಪ್ರಮಾಣದ ಲಾಭ ಸಿಕ್ಕಿದೆ. ನಗರ, ಗ್ರಾಮಾಂತರ ಪ್ರದೇಶಗಳಲ್ಲಿ ಮೂಲಸೌಕರ್ಯಕ್ಕೆ ಒತ್ತು ನೀಡಿದೆ. ಘನತ್ಯಾಜ್ಯ ನಿರ್ವಹಣೆಗೂ ಕೇಂದ್ರ ಅನುದಾನ ನೀಡುತ್ತಿದೆ. ಕೇಂದ್ರ ಘೋಷಣೆ ಮಾಡಿದ ಎಲ್ಲಾ ಯೋಜನೆಗಳ ಅನುದಾನದಲ್ಲಿಯೂ ಬಹುತೇಕವಾಗಿ ರಾಜ್ಯಕ್ಕೆ ಪಾಲು ಇದ್ದೇ ಇದೆ. ಕೇಂದ್ರದ ಅನುದಾನದ ಜೊತೆಗೆ ರಾಜ್ಯದ ಪಾಲು ಸೇರಿಸಿ ಅಭಿವೃದ್ಧಿ ಮಾಡಲಾಗುತ್ತದೆ ಎಂದು ಹೇಳಿದರು.
ಯಡಿಯೂರಪ್ಪ ಸಿಎಂ ಆಗಿದ್ದಾಗ ಭದ್ರಾ ಮೇಲ್ದಂಡೆ ಯೋಜನೆ ಆರಂಭವಾಯಿತು. ಈಗ ಬಜೆಟ್ ನಲ್ಲಿ ಅನುದಾನ ಘೋಷಣೆಯಾಗಿದೆ. ಹೀಗಾಗಿ ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆಯಾಗಿದೆ. ಯೋಜನೆ ಜಾರಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ವಿಪಕ್ಷಗಳು ಅನುದಾನ ಬರುವುದಿಲ್ಲ ಎಂದು ಆರೋಪಿಸುತ್ತಿದ್ದಾರೆ. ಅನುದಾನದ ಬಗ್ಗೆ ತಿಳಿದವರು ಯಾರೂ ಈರೀತಿ ಮಾತನಾಡಲ್ಲ ಎಂದು ಕಿಡಿಕಾರಿದರು.