ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ಮುಂದುವರೆದಿದ್ದು, ಶಂಕಿತ ಉಗ್ರ ಶಾರಿಕ್ ಕುರಿತು ಒಂದೊಂದೇ ಸ್ಪೋಟಕ ಸಂಗತಿಗಳು ಬಹಿರಂಗವಾಗುತ್ತಿವೆ.
ಈ ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡಿರುವ ಮೊಹಮ್ಮದ್ ಶಾರಿಕ್ ನನ್ನು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತ ಚೇತರಿಸಿಕೊಂಡ ಬಳಿಕ ಮತ್ತಷ್ಟು ಸಂಗತಿಗಳು ಬಯಲಾಗಲಿವೆ.
ಮತ್ತೊಂದು ಮಹತ್ವದ ಸಂಗತಿ ಎಂದರೆ ಈ ಕುಕ್ಕರ್ ಬಾಂಬ್ ಸ್ಪೋಟ ನಡೆಯುವ ನಾಲ್ಕು ದಿನಗಳ ಮೊದಲು, ಶಿವಮೊಗ್ಗ ಸಮೀಪದ ಪುರಲೆ ಬಳಿಯ ತುಂಗಾ ನದಿ ದಡದಲ್ಲಿ ಪ್ರಾಯೋಗಿಕವಾಗಿ ಸ್ಪೋಟಕ್ಕೆ ತಾಲೀಮು ನಡೆಸಿದ ಹಾಗೂ ರಾಷ್ಟ್ರ ಧ್ವಜ ಸುಟ್ಟು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾರಿಕ್ ವಿರುದ್ಧ ರಾಷ್ಟ್ರೀಯ ತನಿಖಾ ದಳ ಎಫ್ಐಆರ್ ದಾಖಲಿಸಿತ್ತು.
ಇದೇ ಪ್ರಕರಣದಲ್ಲಿ ಶಿವಮೊಗ್ಗದ ಸೈಯಾದ್ ಯಾಸೀನ್ ಹಾಗೂ ಮಂಗಳೂರಿನ ಮಾಜ್ ಮುನೀರ್ ಅಹಮದ್ ಬಂಧನಗಳಾಗಿದ್ದು, ಮತ್ತೊಬ್ಬ ಆರೋಪಿ ಶಾರಿಕ್ ತಲೆಮರೆಸಿಕೊಂಡಿದ್ದ. ಈಗ ಮಂಗಳೂರಿನಲ್ಲಿ ಬಾಂಬ್ ಸ್ಫೋಟ ನಡೆಸಲು ಹೋಗಿ ಸ್ವತಃ ಗಾಯಗೊಂಡು ಈಗ ಆಸ್ಪತ್ರೆಗೆ ದಾಖಲಾಗಿದ್ದಾನೆ.