ಈ ದೊಡ್ಡ ದೊಡ್ಡ ವೇದಿಕೆಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವ ಅನೇಕರು ತಾವು ಏನೇ ಮಾಡಿದರೂ ಜನ ನೋಡುತ್ತಾರೆ, ತಾವೇನು ಮಾಡಿದರೂ ನಡೆಯುತ್ತದೆ ಎನ್ನುವ ಧೋರಣೆಯಲ್ಲಿರುವುದು ಸಹಜ.
ಬಿಹಾರದಲ್ಲಿ ಆಯೋಜಿಸಿದ್ದ ಥಾವೇ ಮಹೋತ್ಸವ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಹಾಡಲು ಬಂದ ಭೋಜ್ಪುರಿ ಗಾಯಕಿ ಪ್ರಿಯಾಂಕಾ ಸಿಂಗ್‌ರನ್ನು ಆಯೋಜನಕರು ಹಾಡಿನ ಮಧ್ಯದಲ್ಲೇ ತಡೆದು ನಿಲ್ಲಿಸಿದ್ದಾರೆ.
ತಮ್ಮನ್ನು ಈ ರೀತಿ ನಡೆಸಿಕೊಳ್ಳುವುದರ ವಿರುದ್ಧ ವೇದಿಕೆಯಲ್ಲೇ ಪ್ರತಿಭಟಿಸಿದ ಪ್ರಿಯಾಂಕಾ, ಮಾತನಾಡಲು ಎರಡು ನಿಮಿಷ ಕಾಲಾವಕಾಶ ನೀಡಿ ಎಂದು ಕೇಳಿಕೊಂಡರೂ ನಿರೂಪಕಿ ಆಕೆಯ ಮಾತಿಗೆ ಕಿವಿಗೊಡದೇ, ಮುಂದಿನ ಅಭ್ಯರ್ಥಿಗಳನ್ನು ವೇದಿಕೆ ಬರಲು ಕೇಳುತ್ತಾರೆ.
ನೋಡ ನೋಡುತ್ತಲೇ ಪ್ರಿಯಾಂಕಾ ಕೈಲಿದ್ದ ಮೈಕ್‌ಅನ್ನು ಸಹ ಕಸಿಯಲಾಗುತ್ತದೆ.
“ನಾನೇನು ಇಲ್ಲಿ ಬಂದು ಹಾಡಲು ಕಾತರಳಾಗಿರಲಿಲ್ಲ. ನೀವೇ ನನ್ನನ್ನು ಆಹ್ವಾನಿಸಿ ಹೀಗೆ ಈ ರೀತಿ ಅವಮಾನ ಮಾಡುತ್ತಿದ್ದೀರಿ. ಜಿಲ್ಲಾಡಳಿತ ತಪ್ಪು ಮಾಡುತ್ತಿದೆ. ಥಾವೇ ಉತ್ಸವದಲ್ಲಿ ನನಗೆ ಬಹಳ ಕೆಟ್ಟ ಅನುಭವವಾಗಿದೆ,” ಎಂದು ಪ್ರಿಯಾಂಕಾ ಹೇಳಿಕೊಂಡಿದ್ದಾರೆ.
ಪ್ರಿಯಾಂಕಾರ ಜೊತೆಗೆ ಅವರ ಅಭಿಮಾನಿಗಳು ಮಾತ್ರವಲ್ಲ, ವಿಡಿಯೋ ನೋಡಿದ ನೆಟ್ಟಿಗರೂ ನಿಂತಿದ್ದಾರೆ. “ಪ್ರತಿಯೊಂದು ವೇದಿಕೆಗೂ ಅದರದ್ದೇ ಆದ ಘನತೆ ಇರುತ್ತದೆ ಎಂದು ಈ ಆಯೋಜಕರು ಮರೆತಂತಿದೆ. ತಮ್ಮ ಪ್ರಭಾವ ಹಾಗೂ ಅಧಿಕಾರ ಬಳಸಿಕೊಂಡು ಕಲಾವಿದೆಯೊಬ್ಬರನ್ನು ಅವಮಾನಿಸಿದ್ದಾರೆ, ಅದರಲ್ಲೂ ಮಹಿಳೆಗೆ,” ಎಂದು ನಟಿ ಅಕ್ಷರಾ ಸಿಂಗ್ ಪ್ರಿಯಾಂಕಾ ಪರ ಬ್ಯಾಟ್ ಮಾಡಿದ್ದಾರೆ.