ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಜಾರಿಗೊಳಿಸಿದ್ದ ಮಹತ್ವಾಕಾಂಕ್ಷೆಯ ಭಾಗ್ಯಲಕ್ಷ್ಮಿ ಯೋಜನೆ ಆರಂಭಗೊಂಡು 18 ವರ್ಷವಾಗಿದೆ. ಈ ಯೋಜನೆಯೆಡಿ ಆರಂಭಿಕ ವರ್ಷದಲ್ಲಿ ಹೆಸರು ನೋಂದಾಯಿಸಿದ 2.30 ಲಕ್ಷ ಫಲಾನುಭವಿಗಳ ಖಾತೆಗೆ ಶೀಘ್ರವೇ ಮೆಚ್ಯೂರಿಟಿ ಹಣ ಜಮಾ ಮಾಡಲಾಗುವುದು.
ಏಪ್ರಿಲ್ ಮತ್ತು ಮೇ ತಿಂಗಳಾಂತ್ಯಕ್ಕೆ ಈ ಬಾಲಕಿಯರು ಯೋಜನೆಯ ಮೆಚ್ಯೂರಿ ಹಣ ಪಡೆಯಲು ಅರ್ಹರಾಗಿದ್ದು, ಇವರೆಲ್ಲರಿಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿದ್ದತೆ ನಡೆಸಿದೆ. ಯೋಜನೆ ಅಂಚೆ ಇಲಾಖೆ ವ್ಯಾಪ್ತಿಯಲ್ಲಿದ್ದು, ಅಂಚೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚೆ ನಡೆಸಲಾಗಿದ್ದು, ಅರ್ಹ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಲಾಗಿದೆ. ದಾಖಲೆಗಳನ್ನು ಸಂಗ್ರಹಿಸಲು ಇಲಾಖೆ ಮುಂದಾಗಿದೆ.
ಬಡತನ ರೇಖೆಗಿಂತ ಕೆಳಗಿನ ಕುಟುಂಬದಲ್ಲಿ ಜನಿಸಿದ ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದಿದ್ದು, ಹೆಣ್ಣು ಮಕ್ಕಳ ಶಿಕ್ಷಣ, ಆರೋಗ್ಯ, ಸರ್ವಾಂಗೀಣ ಅಭಿವೃದ್ಧಿಗೆ ನಿಶ್ಚಿತ ಠೇವಣಿ ಹೂಡಿಕೆ ಮಾಡಿ ಮಗುವಿಗೆ 18 ವರ್ಷ ಪೂರ್ಣಗೊಂಡ ನಂತರ ಬಡ್ಡಿ ಸಹಿತ ಮೆಚ್ಯೂರಿಟಿ ಹಣ ನೀಡುವ ಯೋಜನೆ ಇದಾಗಿದೆ. ರಾಜ್ಯದಲ್ಲಿ ಆರಂಭದಿಂದ ಇದುವರೆಗೆ 34.50 ಲಕ್ಷ ಮಂದಿ ಭಾಗ್ಯ ಲಕ್ಷ್ಮಿ ಬಾಂಡ್ ಪಡೆದುಕೊಂಡಿದ್ದಾರೆ. ಈಗ ಭಾಗ್ಯಲಕ್ಷ್ಮಿ ಸುಕನ್ಯಾ ಹೆಸರಿನಲ್ಲಿ 4.30 ಲಕ್ಷ ಮಂದಿ ಬಾಂಡ್ ಪಡೆದುಕೊಂಡಿದ್ದಾರೆ. ಭಾಗ್ಯಲಕ್ಷ್ಮಿ ಬಾಂಡ್ ಪಡೆದು 18 ವರ್ಷ ಪೂರ್ಣಗೊಂಡ ಹೆಣ್ಣು ಮಕ್ಕಳಿಗೆ ಷರತ್ತುಗಳ ಅನ್ವಯ ಅವರ ಖಾತೆಗಳಿಗೆ ಮೆಚ್ಯೂರಿಟಿ ಹಣ ವರ್ಗಾವಣೆ ಮಾಡಲಾಗುವುದು.