ಸಿಕ್ಕ ಸಿಕ್ಕ ವಿಚಾರದಲ್ಲೆಲ್ಲಾ ಪುರುಷರ ಜೊತೆಗೆ ಪೈಪೋಟಿಗೆ ಇಳಿದಂತೆ ಕಾಣುವ ಮಹಿಳೆಯರ ವರ್ಗವೊಂದರ ಅಣತಿಯಂತೆ ಸಾರ್ವಜನಿಕ ಈಜು ಕೊಳಗಳಲ್ಲಿ ಟಾಪ್‌ಲೆಸ್ ಆಗಿ ಈಜಲು ಜರ್ಮನಿ ರಾಜಧಾನಿ ಬರ್ಲಿನ್‌ನಲ್ಲಿ ಅನುಮತಿ ಮಾಡಲಾಗಿದೆ.
ಗಂಡಸರು ಈಜುವ ಸಮಯದಲ್ಲಿ ಟಾಪ್‌ಲೆಸ್ ಆಗಿ ಈಜು ಕೊಳಕ್ಕೆ ಹೋಗಲು ಬಿಡಲಿಲ್ಲ ಎಂದು ಸಿಟ್ಟುಗೊಂಡ ಮಹಿಳೆಯೊಬ್ಬಳು ಈ ಸಂಬಂಧ ತಾರತಮ್ಯದ ದೂರು ನೀಡಿದ್ದಾರೆ. ತಮ್ಮ ಹೆಸರು ಹೇಳಲಿಚ್ಛಿಸದ ಮಹಿಳೆ ಬರ್ಲಿನ್‌ನ ವಿಶೇಷ ಸೆನೆಟ್‌ನ ಒಂಬಡ್ಸ್‌ಮನ್ ಬಳಿ ತಮ್ಮ ದೂರನ್ನು ಕೊಂಡೊಯ್ದಿದ್ದು, ’ಗಂಡಸರಂತೆ ಹೆಂಗಸರಿಗೂ ಟಾಪ್‌ಲೆಸ್ ಆಗಿ ಈಜಲು ಅನುಮತಿ ನೀಡಬೇಕು,’ ಎಂದು ಕೋರಿದ್ದಾರೆ.
ಈಜುಕೊಳಕ್ಕೆ ಪ್ರವೇಶಿಸುವ ಸಂದರ್ಭದಲ್ಲಿ ತನ್ನ ದೇಹದ ಮೇಲ್ಭಾಗವನ್ನು ಮುಚ್ಚುವಂತೆ ಕೇಳಲಾದ ವಿಚಾರವನ್ನು ತೀವ್ರವಾಗಿ ಪ್ರಶ್ನಿಸಿದ ಮತ್ತೊಬ್ಬ ಮಹಿಳೆಯ ಕೋರಿಕೆಗೂ ಸ್ಪಂದಿಸಿದ ಪದಾಧಿಕಾರಿಗಳು, ಸ್ನಾನ ಸಂಬಂಧ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದಾರೆ.
ನಗರದಲ್ಲಿರುವ ಈಜುಕೊಳಗಳ ಉಸ್ತುವಾರಿ ನೋಡಿಕೊಳ್ಳುವ ಬರ್ಲಿನರ್ ಬೇಡರ್‌ಬಟ್ರಿಬೆ ಈ ಸಂಬಂಧ ಕಾನೂನುಗಳಲ್ಲಿ ಸೂಕ್ತ ಬದಲಾವಣೆಗಳನ್ನು ತಂದಿರುವುದಾಗಿ ತಿಳಿಸಿದೆ.
20ನೇ ಶತಮಾನದ ಆರಂಭದಿಂದಲೂ ಮುಕ್ತವಾಗಿ ಸೂರ್ಯಸ್ನಾನ ಮಾಡುವ ಸಂಸ್ಕೃತಿಗೆ ಉತ್ತೇಜನ ನೀಡುತ್ತಾ ಬಂದಿರುವ ಬರ್ಲಿನ್‌ನಲ್ಲಿ ’ಸ್ವಾಭಾವಿಕತೆ, ಸರಳತೆ ಹಾಗೂ ನಗ್ನತೆ ಬಗೆಗೆ ಇರುವ ಸಂಕೋಚವನ್ನು ಹೋಗಲಾಡಿಸಲು’ ’ಫ್ರೈಕೋಪರ್ಕಲ್ಚರ್’ಅನ್ನು ಪರಿಚಯಿಸಲಾಗಿದೆ.