ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಮಳೆಯೂರಾಗಿ ಮಾರ್ಪಟ್ಟಿದೆ. ವರುಣಾರ್ಭಟಕ್ಕೆ ಸೃಷ್ಟಿಯಾಗಿರುವ ಅವಾಂತರಗಳಿಗೆ ಲೆಕ್ಕವಿಲ್ಲ. ಸೋಮವಾರ ಸಂಜೆ ಸುರಿದ ಮಳೆಯ ಅಬ್ಬರಕ್ಕೆ ಚರಂಡಿಯಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯೋರ್ವ ಪವಾಡ ರೀತಿಯಲ್ಲಿ ಬಚಾವಾಗಿರುವ ಘಟನೆ ನಡೆದಿದೆ.
ಬೆಂಗಳೂರು ಉತ್ತರ ಭಾಗದಲ್ಲಿ ಧಾರಾಕಾರ ಮಳೆಗೆ ಚರಂಡಿ ನೀರು ರಸ್ತೆ ಮೇಲೆ ಬೋರ್ಗರೆದು ಹರಿದಿದೆ. ಚರಂಡಿ ನೀರಿನಲ್ಲಿ ವ್ಯಕ್ತಿ ಯೋರ್ವ ಅರ್ಧ ಕಿ.ಮೀವರೆಗೆ ಕೊಚ್ಚಿ ಹೋಗಿದ್ದಾರೆ.
ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ವೆಂಕಟೇಶ್ ಎಂಬ ವ್ಯಕ್ತಿಯನ್ನು ಕಂಡು ಸ್ಥಳೀಯರು ಸಿನಿಮೀಯ ರೀತಿಯಲ್ಲಿ ರಕ್ಷಿಸಿದ್ದಾರೆ. ಗಾರೆ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ವೇಳೆ ಮಳೆ ಅಬ್ಬರ ಜೋರಾಗಿ ಏಕಾಏಕಿ ಚರಂಡಿ ನೀರು ರಸ್ತೆ ಮೇಲೆ ಹರಿಯಲಾರಂಭಿಸಿದೆ. ನೀರಿನ ರಭಕ್ಕೆ ಕೊಚ್ಚಿ ಹೋಗಿದ್ದು, ಅರ್ಧ ಕಿ.ಮೀ ವರೆಗೆ ಕೊಚ್ಚಿ ಹೋಗಿದ್ದ ವ್ಯಕ್ತಿಯನ್ನು ಸ್ಥಳೀಯರು ಗಮನಿಸಿ ರಕ್ಷಿಸಿದ್ದಾರೆ.
ಸದ್ಯ ವೆಂಕಟೇಶ್ ಪ್ರಾಣಾಪಾಯದಿಂದ ಪಾರಾಗಿದ್ದು, ಬದುಕಿದೆಯಾ ಬಡಜೀವವೇ ಎಂದು ನಿಟ್ಟುಸಿರುಬಿಟ್ಟಿದ್ದಾರೆ.