ದೇಶದಲ್ಲಿ ಸ್ಟಾರ್ಟ್ ಅಪ್ ಕಂಪನಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗ್ತಿದೆ. ಅನೇಕ ಮಹಿಳೆಯರು ಸ್ಟಾರ್ಟ್ ಅಪ್ ಜಗತ್ತಿಗೆ ಕಾಲಿಟ್ಟಿದ್ದು ವಿಶೇಷ. ಕಳೆದ ಐದು ವರ್ಷಗಳಲ್ಲಿ ಮಹಿಳೆಯರು ನಡೆಸುತ್ತಿರುವ ಸ್ಟಾರ್ಟ್ ಅಪ್ ಕಂಪನಿಗಳ ಸಂಖ್ಯೆಯಲ್ಲಿ ಗಣನೀಯ ಬದಲಾವಣೆ ಆಗಿದೆ. ಶೇಕಡಾ 18 ರಷ್ಟು ಬೆಳವಣಿಗೆಯನ್ನು ಈ ಕ್ಷೇತ್ರದಲ್ಲಿ ನಾವು ನೋಡ್ಬಹುದು.
2017 ರಲ್ಲಿ ಸುಮಾರು 6000 ಸ್ಟಾರ್ಟ್‌ಅಪ್ ಗಳಿದ್ದವು. ಅದರಲ್ಲಿ ಶೇಕಡಾ 10 ರಷ್ಟು ಮಹಿಳಾ ಒಡೆತನದಲ್ಲಿತ್ತು. ಈಗ ಸ್ಟಾರ್ಟ್ ಅಪ್ ಸಂಖ್ಯೆ ಭಾರತದಲ್ಲಿ 80 ಸಾವಿರ ಆಗಿದ್ದು, ಅದರಲ್ಲಿ ಶೇಕಡಾ 18ರಷ್ಟು ಪಾಲು ಮಹಿಳೆಯರದ್ದಿದೆ. ಅಂದ್ರೆ ಸುಮಾರು 14,400 ಸ್ಟಾರ್ಟಪ್‌ಗಳನ್ನು ಮಹಿಳೆಯರೇ ನಡೆಸುತ್ತಿದ್ದಾರೆ.
ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಶೇಷವೆಂದ್ರೆ ಅತಿ ಹೆಚ್ಚು ಮಹಿಳಾ ಸ್ಟಾರ್ಟ್ ಅಪ್ ಕಂಪನಿಗಳನ್ನು ಹೊಂದಿರುವ ನಗರ ಬೆಂಗಳೂರು ಅನ್ನೋದು. ಹೌದು, ಬೆಂಗಳೂರಿನಲ್ಲಿ, ಮಹಿಳಾ ಒಡೆತನದ 1783 ಸ್ಟಾರ್ಟಪ್‌ಗಳಿವೆ. ಮಹಿಳೆಯರೇ ಇದನ್ನು ನಡೆಸ್ತಾ ಇದ್ದು, ಈ ಪಟ್ಟಿಯಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಇನ್ನು ಪಟ್ಟಿಯಲ್ಲಿ ಎರಡನೇ ಸ್ಥಾನ ಮುಂಬೈನದ್ದಾಗಿದೆ. ಇಲ್ಲಿ 1480 ಮಹಿಳಾ ಸ್ಟಾರ್ಟಪ್‌ಗಳಿವೆ. ರಾಷ್ಟ್ರ ರಾಜದಾನಿ ದೆಹಲಿ ಮೂರನೇ ಸ್ಥಾನದಲ್ಲಿದ್ದು, ಅಲ್ಲಿರುವ ಮಹಿಳಾ ಸ್ಟಾರ್ಟ್ ಅಪ್ ಗಳ ಸಂಖ್ಯೆ 1195.
ವಿಶ್ವದ ದೃಷ್ಟಿಯಿಂದ ನೋಡೋದಾದ್ರೆ ಸ್ಟಾರ್ಟ್ ಅಪ್ ವಿಷ್ಯದಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಅಮೆರಿಕಾ ಮೊದಲ ಸ್ಥಾನ ಹಾಗೂ ಚೀನಾ ಎರಡನೇ ಸ್ಥಾನದಲ್ಲಿದೆ.