
ನಬಗ್ರಾಮ್ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶಾಸಕ ಕನೈ ಚಂದ್ರ ಮೊಂಡಲ್ ಅವರು ಡೌನ್ ಇಂಟರ್‌ಸಿಟಿ ಎಕ್ಸ್ ಪ್ರೆಸ್‌ನಲ್ಲಿ ಇತರ ಇಬ್ಬರೊಂದಿಗೆ ಪ್ರಯಾಣ ಮಾಡುತ್ತಿದ್ದರು ಎಂದು ವರದಿಯಾಗಿದೆ. ಅವರಲ್ಲಿ ಒಬ್ಬರು ಟಿಕೆಟ್ ಹೊಂದಿದ್ದರೂ ಅದು ಹೊಂದಿಕೆಯಾಗುತ್ತಿರಲಿಲ್ಲ.
ಈ ಬಗ್ಗೆ ಟಿಟಿ ಪ್ರಶ್ನಿಸಿದಾಗ ವಿಷಯ ಸ್ಪಷ್ಟಪಡಿಸಲು ಅಥವಾ ಅವರೊಂದಿಗೆ ಸಹಕರಿಸಲು ನಿರಾಕರಿಸಿದ ಶಾಸಕ ತಮ್ಮ ಅಧಿಕಾರವನ್ನು ಬೆದರಿಕೆ ಹಾಕಲು ಬಳಸಿಕೊಂಡರು. ಈ ವೇಳೆ ರೈಲಿನಲ್ಲಿದ್ದ ಪ್ರಯಾಣಿಕರು ಶಾಸಕರನ್ನು ಪ್ರಶ್ನಿಸಿದಾಗ ಪರಿಸ್ಥಿತಿ ಉಲ್ಬಣಗೊಂಡಿತು. ಶಾಸಕರ ನಡೆಯಿಂದ ಬೇಸತ್ತ ಪ್ರಯಾಣಿಕರು ಟಿಟಿಯ ಪರವಾಗಿ ನಿಂತರು, ತಮ್ಮ ರಾಜಕೀಯ ಪ್ರಭಾವವನ್ನು ದುರುಪಯೋಗಪಡಿಸಿಕೊಳ್ಳುವ ಶಾಸಕರ ಪ್ರಯತ್ನಗಳನ್ನು ಬಲವಾಗಿ ವಿರೋಧಿಸಿದರು.
ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಶಾಸಕರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜಕಾರಣಿಗಳು ಕಾನೂನಿಗಿಂತ ದೊಡ್ಡವರಲ್ಲ, ಅವರು ನಿಯಮಗಳನ್ನು ಉಲ್ಲಂಘನೆ ಮಾಡುವಂತಿಲ್ಲ ಎಂದಿದ್ದಾರೆ.
ಬಿಜೆಪಿ ನಾಯಕ ಅಗ್ನಿಮಿತ್ರ ಪಾಲ್ ಶಾಸಕರ ನಡೆ ಟೀಕಿಸಿದ್ದು, ಶಾಸಕರು ತಮ್ಮ ಅಧಿಕಾರದ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಮತ್ತು ಅವರು ಕಾನೂನಿಗಿಂತ ಮೇಲಿದ್ದಾರೆಂದು ನಂಬಿದ್ದಾರೆ ಎಂದು ಆರೋಪಿಸಿದರು.