ಬೆಳಗಾವಿ ಮಹಾನಗರ ಪಾಲಿಕೆ: 155 ಪೌರಕಾರ್ಮಿಕರನ್ನು ಖಾಯಂಗೊಳಿಸಲು ನಿರ್ಧಾರ

ಬೆಳಗಾವಿ : ಬೆಳಗಾವಿ  ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅರ್ಹ 155 ಪೌರಕಾರ್ಮಿಕರನ್ನು ಖಾಯಂಗೊಳಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನೇರ ನೇಮಕಾತಿಯಡಿ ಖಾಲಿ ಇರುವ ಒಟ್ಟು 155 ಪೌರಕಾರ್ಮಿಕರ ಹುದ್ದೆಗಳ ನೇಮಕಾತಿಗಾಗಿ ನೇಮಕಾತಿ ಅಧಿಸೂಚನೆ ಹೊರಡಿಸಿದ ದಿನಾಂಕದ ಪೂರ್ವದಲ್ಲಿ ನಿರಂತರವಾಗಿ ಕ್ಷೇಮಾಭಿವೃದ್ಧಿ/ದಿನಗೂಲಿ/ಗುತ್ತಿಗೆ/ಸಮಾನ ಕೆಲಸಕ್ಕೆ ಸಮಾನ ವೇತನ/ಹೊರಗುತ್ತಿಗೆ  ಮೇರೆಗೆ ಕನಿಷ್ಠ 2 ವರ್ಷಗಳ ಸೇವೆ ಸಲ್ಲಿಸಿರುವ ಮತ್ತು ಹಾಲಿ ಕಾರ್ಯನಿರ್ವಹಿಸುತ್ತಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು.

ಸ್ವೀಕೃತ ಅರ್ಜಿಗಳನ್ನು ಪರಿಶೀಲನಾ ಸಮಿತಿಯಿಂದ ಪರಿಶೀಲನೆಗೆ ಒಳಪಡಿಸಿ ಅಂತಿಮವಾಗಿ ಸಲ್ಲಿಕೆಯಾದ ಒಟ್ಟು 468 ಅರ್ಹ ಅಭ್ಯರ್ಥಿಗಳ ಪೈಕಿ ನೇರನೇಮಕಾತಿಯಡಿ ಖಾಲಿ ಇರುವ ಹಾಗೂ ಮೀಸಲಾತಿಗನುಗುಣವಾಗಿ 155 ಅಭ್ಯರ್ಥಿಗಳನ್ನು  ಖಾಯಂಗೊಳಿಸಲು ದಿನಾಂಕ: 18.11.2023 ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ಸಭೆ ಜರುಗಿಸಿ ಅಂತಿಮಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಜಿಲ್ಲಾ ಆಯ್ಕೆ ಸಮಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಿದಂತೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ  ಹೊರಗುತ್ತಿಗೆ ಆಧಾರದ ಮೇರೆಗೆ ಕಾರ್ಯನಿರ್ವಹಿಸುತ್ತಾ ಪ್ರಸ್ತುತ ನೇರವೇತನದಡಿ ಕೆಲಸ ನಿರ್ವಹಿಸುತ್ತಿರುವ 155 ಸದರಿ ಪೌರಕಾರ್ಮಿಕರನ್ನು ಖಾಯಂಗೊಳಿಸಲು ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ದಿ: 18-11-2023 ರಂದು ಪ್ರಕಟಿಸಲಾಗಿದೆ.

ಸದರಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಬೆಳಗಾವಿ ಮಹಾನಗರ ಪಾಲಿಕೆಯ, ಸಂಬಂಧಿಸಿದ ಉಪವಿಭಾಗಾಧಿಕಾರಿಗಳ, ತಹಶೀಲ್ದಾರ ಕಾರ್ಯಾಲಯದ ಹಾಗೂ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ ಹಾಗೂ ಪಾಲಿಕೆಯ / ಡಿಯುಡಿಸಿ ವೆಬ್ ಸೈಟಿನಲ್ಲಿ ಅಳವಡಿಸಲಾಗಿದೆ.

ಸದರಿ ತಾತ್ಕಾಲಿಕ ಆಯ್ಕೆಪಟ್ಟಿಗೆ ಈ ಪ್ರಕಟಣೆಯನ್ನು ಹೊರಡಿಸಿದ 15 ದಿನಗಳೊಳಗಾಗಿ ಅಂದರೆ ದಿನಾಂಕ: 04.12.2023  ರ ಸಾಯಂಕಾಲ 4.00 ಘಂಟೆಯೊಳಗಾಗಿ ಬಾಧಿತ ವ್ಯಕ್ತಿಗಳಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿರುತ್ತದೆ.

ಆಕ್ಷೇಪಣೆಗಳನ್ನು ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಆಯುಕ್ತರು, ಬೆಳಗಾವಿ  ಮಹಾನಗರ ಪಾಲಿಕೆ, ಬೆಳಗಾವಿ ಇವರಿಗೆ ಕಚೇರಿ ವೇಳೆಯಲ್ಲಿ ಸಲ್ಲಿಸಿ ಸ್ವೀಕೃತಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read