ಚಾಮರಾಜನಗರ: ಪಡಿತರ ಚೀಟಿಗೆ ದಾಖಲೆ ಸಲ್ಲಿಸುವಾಗ ವಾಟರ್ ಮ್ಯಾನ್ ಮೇಲೆ ಹಲ್ಲೆ ನಡೆಸಿದ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ದಿನ್ನಹಳ್ಳಿಯಲ್ಲಿ ನಡೆದಿದೆ.
ವಾಟರ್ ಮ್ಯಾನ್ ಸುರೇಶ್ ಸೇರಿದಂತೆ ಮೂವರ ಮೇಲೆ 8 ಜನ ಹಲ್ಲೆ ಮಾಡಿದ್ದಾರೆ. ದಿನ್ನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಜನರನ್ನು ಸರತಿ ಸಾಲಿನಲ್ಲಿ ವಾಟರ್ ಮ್ಯಾನ್ ಸುರೇಶ್ ನಿಲ್ಲಿಸುತ್ತಿದ್ದರು. ಇದೇ ವೇಳೆ ಕಚೇರಿಗೆ ಬಂದಿದ್ದ ವಯೋವೃದ್ಧರೊಬ್ಬರನ್ನು ಸುರೇಶ್ ಕರೆದುಕೊಂಡು ಹೋದಾಗ ಸರತಿ ಸಾಲಿನಲ್ಲಿ ನಿಂತವರು ವಿರೋಧ ವ್ಯಕ್ತಪಡಿಸಿದ್ದು, ಮಾತಿನ ಚಕಮಕಿ ನಡೆದಿದೆ.
ಮಾತಿಗೆ ಮಾತು ಬೆಳೆದು ವಾಟರ್ ಮ್ಯಾನ್ ಸುರೇಶ್ ಮೇಲೆ ಹಲ್ಲೆ ಮಾಡಲಾಗಿದೆ. ಗಲಾಟೆ ಬಿಡಿಸುತ್ತಿದ್ದ ರಾಮಕುಮಾರ್ ಮತ್ತು ತಂದೆ ನಾಗು ನಾಯ್ಕ ಅವರನ್ನು ಥಳಿಸಲಾಗಿದೆ. ಅಲೀಂ, ಶೌಕತ್, ಸುಹೇಲ್, ಸಮಿವುಲ್ಲಾ ಕಾಲು ಸೇರಿದಂತೆ ಎಂಟು ಜನರು ಹಲ್ಲೆ ಮಾಡಿದ್ದು, ಸುರೇಶ, ರಾಮಕುಮಾರ್ ಅವರು ಕೊಳ್ಳೇಗಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಗ್ರಾಪಂ ಕಚೇರಿಗೆ ನುಗ್ಗೆ ಕೆವೈಸಿ ಯಂತ್ರವನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ರಾಮಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.