ಮಹಿಳೆಯರಲ್ಲಿ ಹಾರ್ಮೋನ್ ಅಸಮತೋಲನ ಸರ್ವೇಸಾಮಾನ್ಯ. ಇದು ಅನೇಕ ಕಾಯಿಲೆಗಳಿಗೂ ಕಾರಣವಾಗುತ್ತದೆ. ಹಾರ್ಮೋನ್ ಅಸಮತೋಲನದಿಂದಾಗಿ ಆಯಾಸ, ಕೂದಲು ಉದುರುವಿಕೆ, ಮುಟ್ಟಿನಲ್ಲಿ ಏರುಪೇರು, PCOD ಮತ್ತು PCOS ಇತ್ಯಾದಿ ಸಮಸ್ಯೆಗಳಾಗುತ್ತವೆ.
ದೇಹವು ಸರಿಯಾಗಿ ಕಾರ್ಯನಿರ್ವಹಿಸಬೇಕೆಂದರೆ ಹಾರ್ಮೋನುಗಳು ಸಮತೋಲನದಲ್ಲಿರಬೇಕು. ಅದರಲ್ಲೂ ಮಹಿಳೆಯರ ದೇಹದಲ್ಲಿ ಹಾರ್ಮೋನ್ ಸಮತೋಲನ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಯಾವಾಗಲೂ ದೇಹದಲ್ಲಿ ಶಕ್ತಿಯ ಕೊರತೆ, ತೂಕದಲ್ಲಿ ಏರಿಳಿತ, ಮೂಡ್ ಸ್ವಿಂಗ್, ನಿದ್ರೆಯ ಕೊರತೆ, ನಿದ್ರಾಹೀನತೆ ಇಂತಹ ಸಮಸ್ಯೆಗಳೆಲ್ಲ ಕಾಣಿಸಿಕೊಂಡರೆ ಅದು ಹಾರ್ಮೋನ್ ಅಸಮತೋಲನದ ಆರಂಭಿಕ ಲಕ್ಷಣ ಎಂಬುದರಲ್ಲಿ ಸಂದೇಹವಿಲ್ಲ.
ಮಹಿಳೆಯರು ಜೀವನದಲ್ಲಿ ಒಮ್ಮೆಯಾದರೂ ಹಾರ್ಮೋನ್ ಅಸಮತೋಲನಕ್ಕೆ ಒಳಗಾಗುತ್ತಾರೆ. ಪ್ರೌಢಾವಸ್ಥೆ, ಮುಟ್ಟಿನ ಸಮಯ, ಗರ್ಭಾವಸ್ಥೆ ಅಥವಾ ಋತುಬಂಧದಂತಹ ವಿವಿಧ ಹಂತಗಳಲ್ಲಿ ಮಹಿಳೆಯರ ದೇಹದಲ್ಲಿ ಅನೇಕ ರೀತಿಯ ಹಾರ್ಮೋನ್ ಬದಲಾವಣೆಗಳು ನಡೆಯುತ್ತವೆ. ಕೆಲವು ಮಹಿಳೆಯರು ನಿರಂತರವಾಗಿ ಈ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಹಾರ್ಮೋನ್ ಅಸಮತೋಲನದ ಆರಂಭಿಕ ಲಕ್ಷಣಗಳು
ಮುಟ್ಟಿನ ಮಾದರಿ
ಅನಿಯಮಿತ ಋತುಚಕ್ರ, ವಿಪರೀತ ರಕ್ತಸ್ರಾವ ಮತ್ತು ತೀವ್ರವಾದ ಪ್ರೀ ಮೆನ್‌ಸ್ಟ್ರುವಲ್ ಸಿಂಡ್ರೋಮ್ ಹಾರ್ಮೋನ್ ಅಸಮತೋಲನದ ಆರಂಭಿಕ ಲಕ್ಷಣಗಳಾಗಿವೆ.
ಮನಸ್ಥಿತಿಯಲ್ಲಿ ಏರುಪೇರು
ಯುವ ಪೀಳಿಗೆಯಲ್ಲಿ ಮನಸ್ಥಿತಿ ಬದಲಾವಣೆ ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ಇದು ಮಿತಿಮೀರಿದರೆ ಸಮಸ್ಯೆಯಾಗಿ ಬದಲಾಗಬಹುದು. ಅತಿಯಾದ ಕೋಪ, ಸಿಡುಕು, ಆತಂಕ ಇವೆಲ್ಲವೂ ಹಾರ್ಮೋನ್ ಅಸಮತೋಲನದ ಕಾರಣದಿಂದ ಬರಬಹುದು.
ಚರ್ಮದ ಸಮಸ್ಯೆಗಳು
ಮುಖದ ಮೇಲೆ ಅತಿಯಾದ ಮೊಡವೆಗಳು ಕಾಣಿಸಿಕೊಳ್ಳಲಾರಂಭಿಸಿದರೆ ಅದು ಕೂಡ ಹಾರ್ಮೋನ್ ಅಸಮತೋಲನದ ಸಂಕೇತವಾಗಿರಬಹುದು. ಚರ್ಮದ ಬಣ್ಣ ಮತ್ತು ವಿನ್ಯಾಸದಲ್ಲಿ ಬದಲಾವಣೆ ಕೂಡ ಇದರ ಲಕ್ಷಣಗಳಾಗಿವೆ.
ಆಯಾಸ
ಪದೇ ಪದೇ ಆಯಾಸ ಮತ್ತು ವಿಚಿತ್ರ ಭಾವನೆಯನ್ನು ಅನುಭವಿಸುತ್ತಿದ್ದರೆ ಹಾರ್ಮೋನ್ ಅಸಮತೋಲನಕ್ಕೆ ಒಳಗಾಗುತ್ತಿದ್ದೀರಿ ಎಂಬುದನ್ನು ಅರ್ಥಮಾಡಿಕೊಳ್ಳಿ. ಇವು ಥೈರಾಯ್ಡ್‌ನ ಲಕ್ಷಣಗಳೂ ಆಗಿರಬಹುದು.
ತೂಕ ಹೆಚ್ಚಳ ಮತ್ತು ನಷ್ಟ
ಜಿಮ್, ವ್ಯಾಯಾಮ ಮತ್ತು ಯೋಗ ಹೀಗೆ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ತೂಕ ಇಳಿಸಲು ಸಾಧ್ಯವಾಗದೇ ಇದ್ದರೆ ಹಾರ್ಮೋನ್ ಅಸಮತೋಲನ ಉಂಟಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ. ಹಾರ್ಮೋನ್ ಅಸಮತೋಲನದಿಂದ ತೂಕ ನಷ್ಟವೂ ಆಗಬಹುದು.