
ಬೆಂಗಳೂರು: ಮಹಿಳಾ ಸಿಬ್ಬಂದಿ ರಜೆ ಹಾಕಿದ್ದಕ್ಕೆ ಬಿಬಿಎಂಪಿ ಕಚೇರಿಯಲ್ಲಿ ಹಿರಿಯ ಅಧಿಕಾರಿಯೊಬ್ಬರು ಅವಾಚ್ಯವಾಗಿ ನಿಂದಿಸಿ, ಬಾಯಿಗೆ ಬಂದಂತೆ ನಾಲಿಗೆ ಹರಿಬಿಟ್ಟಿರುವ ಘಟನೆ ನಡೆದಿದೆ.
ಬಿಬಿಎಂಪಿ ಸಹಾಯಕ ಆಯುಕ್ತ ಶ್ರೀನಿವಾಸ್ ಮೂರ್ತಿ ಎಂಬುವವರು, ರಜೆ ಮುಗಿಸಿ ವಾಪಾಸ್ ಆಗಿದ್ದ ಮಹಿಳಾ ಸಿಬ್ಬಂದಿಯನ್ನು ಕೆಟ್ಟ ಪದಗಳಿಂದ ನಿಂದಿಸಿತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಹಿಳಾ ಸಿಬ್ಬಂದಿಯೊಬ್ಬರು ಅನಿವಾರ್ಯ ಕಾರಣಕ್ಕೆ 5 ದಿನ ರಜೆ ಹಾಕಿದ್ದರು. ಇದರಿಂದ ಕೋಪಗೊಂಡ ಅಧಿಕಾರಿ ಶ್ರೀನಿವಾಸ್ ಮೂರ್ತಿ, ದಂಧೆ ನಡೆಸ್ತಿದ್ದೀಯಾ? ಅದಕ್ಕೆ ರಜೆ ಹಾಕಿದ್ದೀಯಾ? ಎಂದು ಅವಾಚ್ಯವಾಗಿ ನಿಂದಿಸಿದ್ದಾರೆ.
ಅಷ್ಟಕ್ಕೆ ನಿಲ್ಲದ ಅಧಿಕಾರಿಯ ಮಾತು ರಜೆ ಹಾಕಲು ಹೆಚ್ ಐವಿ ಬಂದಿದ್ಯಾ? ನಿನ್ನನ್ನು ಯಾರಾದರೂ ರೇಪ್ ಮಾಡಿ ಬಿಸಾಕಿದ್ರಾ? ಪಾಸಿಟಿವ್ ಇದ್ಯಾ ಅಂತ ಟೆಸ್ಟ್ ಮಾಡಿಸಿಕೊಂಡ್ಯಾ? ಎಂದು ಮನಬಂದಂತೆ ಕೇಳಿದ್ದಾರೆ. ಮಹಿಳಾ ಸಿಬ್ಬಂದಿ ಏನು ಮಾತನಾಡುತ್ತಿದ್ದೀರಾ? ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಆಕ್ಷೇಪಿಸುತ್ತಿದ್ದಂತೆ ನಾನು ನಿನಗೆ ಕೇಳಿಲ್ಲ ಎಂದು ಸಮಜಾಯಿಷಿ ಕೊಟ್ಟಿದ್ದಾರೆ.
ಅಧಿಕಾರಿಯ ವರ್ತನೆಯಿಂದ ಬೇಸತ್ತ ಮಹಿಳಾ ಸಿಬ್ಬಂದಿ ಬಿಬಿಎಂಪಿ ವಿಶೇಷ ಆಯುಕ್ತರಿಗೆ ಪತ್ರದ ಮೂಲಕ ದೂರು ನೀಡಿದ್ದಾರೆ. ಪಾಲಿಕೆ ಅಧಿಕಾರಿ ಶ್ರೀನಿವಾಸ್ ಮೂರ್ತಿ ವಿರುದ್ಧ ಈ ಹಿಂದೆಯೂ ಆರೋಪಗಳು ಕೇಳಿಬಂದಿತ್ತು. ನೌಕರ ಸಂಘಟನೆ ಅಧಿಕಾರಿಯ ವರ್ತನೆ ಬಗ್ಗೆ ಎಚ್ಚರಿಕೆ ನೀಡಿತ್ತು. ಆದಾಗ್ಯೂ ಸರಿಪಡಿಸಿಕೊಳ್ಳದ ವ್ಯಕ್ತಿ ಮತ್ತದೇ ತನ್ನ ದುರ್ವರ್ತನೆ ಮುಂದುವರೆಸಿದ್ದಾರೆ ಎಂದು ಮಹಿಳಾ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.