ಬೆಂಗಳೂರು: ಬಸ್, ಮೆಟ್ರೋ ಪ್ರಯಾಣ ದರ, ಹಾಲು, ವಿದ್ಯುತ್ ದರ ಏರಿಕೆಯಿಂದ ತತ್ತರಿಸಿರುವ ಬೆಂಗಳೂರು ಜನತೆಗೆ ಮತ್ತೊಂದು ಬಿಸಿ ತಟ್ಟಲಿದೆ. ಏಪ್ರಿಲ್ 1ರಿಂದ ಘನ ತ್ಯಾಜ್ಯ ವಿಲೇವಾರಿ ಶುಲ್ಕ ವಿಧಿಸುವುದಾಗಿ ಬಿಬಿಎಂಪಿ ಘೋಷಿಸಿದೆ.
ಬಿಬಿಎಂಪಿ ಬಜೆಟ್ ನಲ್ಲಿ ಆಸ್ತಿ ತೆರಿಗೆ ಸೇರಿದಂತೆ ಬೇರೆ ಯಾವುದೇ ನೇರವಾಗಿ ಸಾರ್ವಜನಿಕರಿಗೆ ಹೊರೆ ಆಗುವಂತಹ ಘೋಷಣೆಗಳನ್ನು ಬಿಬಿಎಂಪಿ ಮಾಡಿಲ್ಲ. ಆದರೆ, ಮನೆಗಳಿಂದ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡುವುದಕ್ಕೆ ಮಾಸಿಕ ಶುಲ್ಕ ವಿಧಿಸಲು ತೀರ್ಮಾನಿಸಲಾಗಿದೆ.
ಹೀಗೆ ವಿಧಿಸುವ ಶುಲ್ಕವನ್ನು ಬಿಬಿಎಂಪಿ ಆಸ್ತಿ ತೆರಿಗೆಯೊಂದಿಗೆ ಸಂಗ್ರಹಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ಆಸ್ತಿ ಮಾಲೀಕರು ಆಸ್ತಿ ತೆರಿಗೆ ಪಾವತಿಸುವಾಗ ಈ ಘನತ್ಯಾಜ್ಯ ವಿಲೇವಾರಿ ಶುಲ್ಕವನ್ನು ಕೂಡ ಪಾವತಿಸಲು ವ್ಯವಸ್ಥೆ ಮಾಡಲಾಗುವುದು ಎನ್ನಲಾಗಿದೆ.