ಬೆಂಗಳೂರು: ತಂದೆ ಎಸ್.ಆರ್. ಬೊಮ್ಮಾಯಿ ಹಾಗೂ ಬಿ.ಎಸ್. ಯಡಿಯೂರಪ್ಪ ಅವರನ್ನು ನೆನೆದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಣ್ಣೀರು ಹಾಕಿದ್ದಾರೆ.
ಮಾಜಿ ಸಿಎಂ ಎಸ್.ಆರ್. ಬೊಮ್ಮಾಯಿ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಭಾವುಕರಾಗಿದ್ದಾರೆ. ಬೆಂಗಳೂರಿನ ಕುಮಾರಕೃಪ ರಸ್ತೆಯ ಗಾಂಧಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ತಂದೆ ಎಸ್.ಆರ್. ಬೊಮ್ಮಾಯಿ, ಯಡಿಯೂರಪ್ಪ ಮತ್ತು ಎಸ್.ಎಂ. ಕೃಷ್ಣ ಹೋರಾಟ ಮಾಡಿ ಬಂದವರು. ಈ ಮೂವರು ಯಾವುದೇ ಗಾಡ್ ಫಾದರ್ ಇಲ್ಲದೆ ಬೆಳೆದು ಬಂದವರು. ಈ ಮಾತು ನನಗೆ ಅನ್ವಯಿಸುವುದಿಲ್ಲ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ನನ್ನನ್ನು ಗುರುತಿಸಿ ನನಗೆ ಶಕ್ತಿ ತುಂಬಿದ ಯಡಿಯೂರಪ್ಪನವರು. ನನ್ನ ಮನೆಗೆ ಬಂದು ನನಗೆ ಎಲ್ಲಾ ರೀತಿಯಲ್ಲೂ ಶಕ್ತಿ ತುಂಬಿದವರು, ನನಗೆ ಅವಕಾಶ ಕೊಟ್ಟವರು ಯಡಿಯೂರಪ್ಪ. ಹೀಗಾಗಿ ಯಡಿಯೂರಪ್ಪ ಅವರನ್ನು ನಾನು ತಂದೆಯವರಂತೆ ಕಾಣುತ್ತೇನೆ ಎಂದು ತಮ್ಮ ತಂದೆಯ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.