ಹುಬ್ಬಳ್ಳಿ: ಬಿಜೆಪಿ ಆಡಳಿತಾವಧಿಯಲ್ಲಿ ರೈತರಿಗೆ ಯಾವ ನೋಟಿಸ್ ನೀಡಿಲ್ಲ. ಆದರೆ, ಸಚಿವ ಜಮೀರ್ ಅಹಮದ್ ಖಾನ್ ಹಾಗೂ ಕಾಂಗ್ರೆಸ್ ಸರ್ಕಾರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ್ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ್ ಬೊಮ್ಮಾಯಿ, ಜಮೀರ್ ಅವರೇ, ರೈತರಿಗೆ ನೋಟಿಸ್ ನೀಡುವ ಮೊದಲು ವಕ್ಫ್ ಆಸ್ತಿ ಒತ್ತುವರಿ ಮಾಡಿದ ಆ ಕಾಂಗ್ರೆಸ್ ನಾಯಕರಿಗೆ ನೋಟಿಸ್ ನೀಡಿ ಹಾಗೇ ವಕ್ಫ್ ಸಂಬಂಧ ಹೊರಡಿಸಿರುವ ಗೆಜೆಟ್ ನೋಟಿಫಿಕೇಶನ್ ರದ್ದು ಮಾಡಿ ಎಂದು ಆಗ್ರಹಿಸಿದರು.
ನಾನು ಯಾವುದೇ ವಕ್ಫ್ ಮೀಟಿಂಗ್ ಮಾಡಿಲ್ಲ. ಅನ್ವರ್ ಮಣಿಪ್ಪಾಡಿ ಅವರ ನೇತೃತ್ವದಲ್ಲಿ ಕಮಿಟಿ ರಚಿಸಲಾಗಿತ್ತು. ಕಾಂಗ್ರೆಸ್ ನ ದೊಡ್ಡ ದೊಡ್ಡ ನಾಯಕರು ಎಷೆಷ್ಟು ವಕ್ಫ್ ಆಸ್ತಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಅನ್ವರ್ ಮಣಿಪ್ಪಾಡಿ ಅವರ ವರದಿಯಲ್ಲಿ ಸ್ಪಷ್ಟವಾಗಿದೆ. ವರದಿಯಲ್ಲಿರುವ ಆಸ್ತಿಇಯನ್ನು ಹಿಇಂಪಡೆಯಬೇಕು ಎಂದಿದ್ದೇನೆ ಹೊರತು ನಮ್ಮ ಸರ್ಕಾರದ ಅವಧಿಯಲ್ಲಿ ರೈತರುಗೆ ಯಾವುದೇ ನೋಟಿಸ್ ನೀಡಿಲ್ಲ. ರೈತರ ಜಮೀನಿನ ಬಗ್ಗೆ ನಾನು ಮಾತನಾಡಲ್ಲ ಎಂದು ಹೇಳಿದರು.
ನಾನು ಯಾವುದೋ ಸಂದರ್ಭದಲ್ಲಿ ಮಾತನಾಡಿದ್ದನ್ನು ತೋರಿಸಿ ಜಮೀರ್ ಹಾಗೂ ಕಾಂಗ್ರೆಸ್ ನವರು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.