ಗದಗ: ಕಾಂಗ್ರೆಸ್ ಗೆ ಐಟಿ ನೋಟೀಸ್ ವಿಚಾರವಾಗಿ ಕೇಂದ್ರ ಬಿಜೆಪಿ ಸರ್ಕಾರ ತೆರಿಗೆ ಭಯೋತ್ಪಾದನೆ ಮಾಡುತ್ತಿದೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಕಾಂಗ್ರೆಸ್ ಯಾವಾಗಲೂ ಬ್ಲ್ಯಾಕ್ ಮನಿ ಮೇಲೆ ರಾಜಕಾರಣ ಮಾಡುತ್ತದೆ. ಸುಮಾರು 600 ಕೋಟಿ ರೂ.ತೆರಿಗೆ ವಂಚನೆ ಮಾಡಿದೆ. ಅದನ್ನು ಪ್ರಶ್ನೆ ಮಾಡಬಾರದೇ ಎಂದು ಕೇಳಿದ್ದಾರೆ.
ಗದಗದಲ್ಲಿ ಮಾತನಾಡಿದ ಮಾಜಿ ಸಿಎಂ ಬೊಮ್ಮಾಯಿ, ಕಾಂಗ್ರೆಸ್ ಗೆ ಐಟಿ ನೋಟೀಸ್ ಗೂ ಚುನಾವಣೆಗೂ ಸಂಬಂಧವಿಲ್ಲ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ, ದೇವೇಗೌಡರಿಗೆ ಜೆಡಿಎಸ್ ಪಕ್ಷ ಎಲ್ಲಿದೆ ಎಂದು ಪ್ರಶ್ನಿಸಿದ್ದರು. ಆ ಹಿನ್ನೆಲೆಯಲ್ಲಿ ದೇವೇಗೌಡರು ಅವರ ಗರ್ವಭಂಗವಾಗಬೇಕಿದೆ ಅಂತ ಹೇಳಿಕೆ ಕೊಟ್ಟಿದ್ದಾರೆ. ನಾವು ಕಾಂಗ್ರೆಸ್ ವಿರುದ್ದ ಮೈತ್ರಿ ಮಾಡಿಕೊಂಡಿದ್ದೇವೆ. ಸಿದ್ದರಾಮಯ್ಯ ಅವರು ಕಾಂಗ್ರೆಸ್ ನಾಯಕರು, ಹೀಗಾಗಿ ಅವರ ವಿರುದ್ದ ನಮ್ಮ ಹೋರಾಟ ಇದ್ದೇ ಇರುತ್ತದೆ ಎಂದರು.
ಇದೇ ವೇಳೆ ದಾವಣಗೆರೆ ಬಿಜೆಪಿ ಮಹಿಳಾ ಅಭ್ಯರ್ಥಿ ಕುರಿತು ಶಾಸಕ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಿಎಂ, ಯಾವುದೇ ಪಕ್ಷದ ಅಭ್ಯರ್ಥಿ ಇರಲಿ ಮಹಿಳೆಯರ ಬಗ್ಗೆ ಮಾತನಾಡುವುದು ಸರಿಯಲ್ಲ. ಮಹಿಳೆಯರಿಗೆ ಅವಮಾನ ಮಾಡಿದಂತಾಗುತ್ತದೆ. ಅದಕ್ಕೆ ಸಹಜವಾಗಿ ವಿರೋಧ ವ್ಯಕ್ತವಾಗುತ್ತದೆ ಎಂದು ಹೇಳಿದರು.