ಹುಬ್ಬಳ್ಳಿ: ಮೋದಿ ಮೋದಿ ಎಂದು ಕೂಗುವ ಯುವಕರಿಗೆ ಕಪಾಳಕ್ಕೆ ಹೊಡೆಯಿರಿ ಎಂದಿರುವ ಸಚಿವ ಶಿವರಾಜ್ ತಂಗಡಗಿ ಹೇಳಿಕೆಗೆ ತಿರುಗೇಟು ನೀಡಿದ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಅವರು ಇನ್ನು ಸ್ವಲ್ಪ ದಿನ ತಾಳಲಿ, ಮತಗಳ ಮೂಲಕ ಜನ ಕಾಂಗ್ರೆಸ್ ಗೆ ಕಪಾಳಕ್ಕೆ ಹೊಡೆಯುತ್ತಾರೆ ಎಂದು ಹೇಳಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಬೊಮ್ಮಾಯಿ, ರಾಜ್ಯದಲ್ಲಿ ವಾತಾವರಣ ಉತ್ತಮವಾಗಿದೆ. ಎಲ್ಲ ಕಡೆ ಮೋದಿ ಪರ ಅಲೆ ಇದೆ. ರಾಜ್ಯದಲ್ಲಿ ಭಿನ್ನಮತ ಶಮನ ಆಗುತ್ತಿದೆ ಎಂದರು.
ಇನ್ನು ರಾಜ್ಯಕ್ಕೆ ಕೇಂದ್ರದಿಂದ ಯುಪಿಎ ಕಾಲದಲ್ಲಿ ಎಷ್ಟು ಹಾಗೂ ಎನ್ ಡಿಎ ಕಾಲದಲ್ಲಿ ಎಷ್ಟು ಎನ್ ಡಿಆರ್ ಎಫ್ ಹಣ ಬಂದಿದೆ ಅನ್ನುವುದನ್ನು ರಾಜ್ಯ ಸರ್ಕಾರ ಬಹಿರಂಗ ಪಡಿಸಲಿ ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ಅಧೋಗತಿಗೆ ಗೋಗಿದೆ. ಅದೇ ಕಾರಣಕ್ಕೆ ಸುಪ್ರೀಂ ಕೋರ್ಟ್ ಗೆ ಹೋಗಿದ್ದಾರೆ. ಸುಪ್ರೀಂ ಕೋರ್ಟ್ ಗೆ ಹೋಗಿರುವುದು ರಾಜಕೀಯ ತಂತ್ರಗಾರಿಕೆ. ರಾಜ್ಯ ಸರ್ಕಾರ ಕೇಂದ್ರದಿಂದ ಹಣ ಬಂದಿಲ್ಲ ಎಂದು ಹೇಳುವುದನ್ನು ಬಿಟ್ಟು, ಯುಪಿಎ ಅವಧಿಯಲ್ಲಿ ಹಾಗೂ ಎನ್ ಡಿಎ ಅವಧಿಯಲ್ಲಿ ಎನ್ ಡಿ ಆರ್ ಎಫ್ ನಿಧಿಯಿಂದ ಎಷ್ಟು ಹಣ ಬಂದಿದೆ ಎಂದು ಬಹಿರಂಗಪಡಿಸಲಿ ಎಂದರು.