ಹಾವೇರಿ: ಸಿಎಂ ಸಿದ್ದರಾಮಯ್ಯನವರ ಆಡಳಿತಕ್ಕೂ ಅವರ ಅನುಭವಕ್ಕೂ ಬಹಳ ವ್ಯತ್ಯಾಸವಿದೆ. ಕಳೆದ 10 ತಿಂಗಳಿನಲ್ಲಿ ಸಿದ್ದರಾಮಯ್ಯನವರ ಕೆಟ್ಟ ಆಡಳಿತ ಹೇಗಿದೆ ಎನ್ನುವುದು ಗೊತ್ತಾಗುತ್ತಿದೆ ಎಂದು ಮಾಜಿ ಸಿಎಂ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರೊಡನೆ ಬಹಿರಂಗ ಪ್ರಚಾರ ಸಭೆ ನಡೆಸಿ ಮಾತನಾಡಿದ ಮಾಜಿ ಸಿಎಂ ಬೊಮ್ಮಾಯಿ, ರಾಜ್ಯದಲ್ಲಿ ಒಂದು ಸರ್ಕಾರವಿದೆ ಅಷ್ಟೇ. ಆದರೆ ಸಿದ್ದರಾಮಣ್ಣನ ಆಡಳಿತದ ಈ ಸರ್ಕಾರಕ್ಕೂ ಸಿದ್ದರಾಮಯ್ಯಗಿರುವ ಅನುಭವಕ್ಕೂ ವ್ಯತ್ಯಾಸವಿದೆ. ಈ ಸಿದ್ದರಾಮಣ್ಣನ ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಇಲಾಖೆಯಲ್ಲಿಯೂ ಒಂದು ಸಣ್ಣ ಕೆಲಸವೂ ಕೂಡ ಆಗಿಲ್ಲ. ಗ್ರಾಮೀಣ ಅಭಿವೃದ್ಧಿಯಲ್ಲಿ ಕೆಲಸ ಆಗಿಲ್ಲ. ಜನರ ಕೆಲಸಗಳನ್ನು ಈ ಕಾಂಗ್ರೆಸ್ ಸರ್ಕಾರ ಮಾಡುತ್ತಿಲ್ಲ. ಯಾವುದೇ ಇಲಾಖೆಯಲ್ಲಿ ಅಭಿವೃದ್ಧಿಯಾಗಿಲ್ಲ ಎಂದು ಆರೋಪಿಸಿದರು.
ಗ್ಯಾರಂಟಿ ಯೋಜನೆಗಳಿಗೆ ಕಾಂಗ್ರೆಸ್ ಸರ್ಕಾರ ಹಣಕಾಸಿನ ವ್ಯವಸ್ಥೆ ಮಾಡಿಲ್ಲ. ಸರಿಯಾದ ವ್ಯವಸ್ಥೆ ಮಾಡದೆಯೇ ಕಾಂಗ್ರೆಸ್‌ನವರು ಗ್ಯಾರೆಂಟಿಗಳನ್ನು ಕೊಡುತ್ತೇವೆ ಎಂದರು. ಈಗ ಇದ್ದ ಹಣಕಾಸಿಗೆ ಕೈ ಹಾಕಿ ಗ್ಯಾರಂಟಿಗೆ ಕೊಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ಖಜಾನೆಯಲ್ಲಿ ಒಂದೂ ನಯಾ ಪೈಸೆಯೂ ಉಳಿದಿಲ್ಲ. ಬೊಕ್ಕಸ ಬರಿದಾಗಿದೆ ಎಂದರು.
ಸರ್ಕಾರದವರಿಗೆ ಜನರ ಕೆಲಸ ಮಾಡಲು ಸಮಯವೇ ಇಲ್ಲ. ಮುಖ್ಯಮಂತ್ರಿಗಳಿಂದ ಹಿಡಿದು ಮಂತ್ರಿಗಳವರೆಗೂ ತಮ್ಮತಮ್ಮ ಖುರ್ಚಿಯನ್ನು ಭದ್ರಗೊಳಿಸಿಕೊಳ್ಳಲು ಓಡಾಡುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಕೆಲವು ಮಂತ್ರಿಗಳಿಗೆ ಲೋಕಸಭಾ ಚುನಾವಣೆಗೆ ನಿಲ್ಲಿ ಎಂದು ಹೇಳಿದ್ದಾರೆ. ಏಕೆಂದರೆ, ಇವು 5 ಗ್ಯಾರೆಂಟಿಗಳ ಜೊತೆ ಅಭ್ಯರ್ಥಿಗಳನ್ನು ಸೋಲಿಸುವ ಗ್ಯಾರೆಂಟಿಯೂ ಸಿದ್ದರಾಮಯ್ಯ ಸರ್ಕಾರದ್ದಾಗಿದೆ. ಮತ್ತೆ ಮೋದಿ ಪ್ರಧಾನಿಗಳಾಗಿ ಸರ್ಕಾರ ಬಂದ ತಕ್ಷಣ ಈ ಸರ್ಕಾರದ ದಿನಗಣನೆ ಪ್ರಾರಂಭವಾಗಲಿದೆ. ಇನ್ನು 6 ತಿಂಗಳು ಅಥವಾ 1 ವರ್ಷದೊಳಗೆ ಈ ಕರ್ನಾಟಕ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಬಂದೇ ಬರುತ್ತದೆ ಎಂದು ಭವಿಷ್ಯ ನುಡಿದರು.