ಪರಶುರಾಮ ಸೃಷ್ಟಿಯ ಅವಿಭಜಿತ ತುಳುನಾಡು, ದೇಶದ ಪ್ರಖ್ಯಾತ ದೈವ-ದೇವಾಲಯಗಳ ಬೀಡು. ಇಲ್ಲಿನ ಕರಾವಳಿಯುದ್ದಕ್ಕೂ ವ್ಯಾಪಿಸಿರುವ ಅಸಂಖ್ಯಾತ ದೇವ ಸನ್ನಿಧಿಗಳು ತಮ್ಮ ಕಾರಣಿಕ ಶಕ್ತಿಗಳ ಮೂಲಕವೇ ಭಕ್ತರ ಸಕಲ ಕಷ್ಟಗಳನ್ನು ನಿವಾರಿಸುತ್ತಿವೆ. ಇಂತಹ ದೇವಾಲಯಗಳ ಸಾಲಿನಲ್ಲಿ ಅಗ್ರಮಾನ್ಯವಾಗಿ ಗುರುತಿಸಿಕೊಂಡಿರುವಂತದ್ದು ಮಂಗಳೂರಿನ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ.
ಮಂಗಳೂರು ಉಡುಪಿ ರಾಷ್ಟ್ರೀಯ ಹೆದ್ದಾರಿ 66ರ ಮಧ್ಯಭಾಗದಲ್ಲಿರುವ ಮೂಲ್ಕಿ ಪಟ್ಟಣದಲ್ಲಿ ಈ ಬಪ್ಪನಾಡು ದೇವಸ್ಥಾನವಿದೆ. ಶಾಂಭವಿ ನದಿ ತಟದಲ್ಲಿರುವ ಈ ಕ್ಷೇತ್ರಕ್ಕೆ ಬಪ್ಪು ಎನ್ನುವ ಮುಸ್ಲಿಂ ವ್ಯಾಪಾರಿಯಿಂದಾಗಿ ಈ ಹೆಸರು ಬಂದಿದೆ. ಇಲ್ಲಿನ ವಾರ್ಷಿಕ ಜಾತ್ರೆಯಲ್ಲಿ ಸಮಾಜದ ಎಲ್ಲಾ ವರ್ಗದ ಜನರು ಪಾಲ್ಗೊಗೊಳ್ಳುವುದು ತುಂಬಾ ವಿಶಿಷ್ಟ. ದೇವಾಲಯದ ಮುಖ್ಯ ದೇವತೆ ಶ್ರೀ ದುರ್ಗಾಪರಮೇಶ್ವರಿ ದೇವತೆಯಾಗಿದ್ದು, ಲಿಂಗ ರೂಪದಲ್ಲಿ ಪೂಜಿಸಲಾಗುತ್ತದೆ. ತುಳುವರಿಂದ ‘ಉಳ್ಳಾಲ್ತಿ’ ಎಂದು ಕರೆಯಲ್ಪಡುವ ಈ ದೇವತೆ ಎಲ್ಲ ಜನಾಂಗ ಮತ್ತು ಜಾತಿಗಳಿಂದ ಆರಾಧಿಸಲ್ಪಟ್ಟಿದೆ. ಮೂರು ಹೊತ್ತಿನ ನಿತ್ಯ ಪೂಜೆ, ಮೂರು ಹೊತ್ತು ಬಲಿ ಉತ್ಸವ, ನಿತ್ಯ ಅನ್ನದಾನ ಸೇವೆ ಇಲ್ಲಿ ನಡೆದುಕೊಂಡು ಬಂದಿದೆ.
ಹೀಗೆ ಪೌರಾಣಿಕ ಹಿನ್ನಲೆಯನ್ನು ಹೊಂದಿರುವ ಬಪ್ಪನಾಡು ದುರ್ಗಾಪರಮೇಶ್ವರಿ ಸನ್ನಿಧಾನ ಇಂದು ಅಸಂಖ್ಯಾತ ಭಕ್ತರ ಪಾಲಿನ ಕಾರಣಿಕ ಕ್ಷೇತ್ರವಾಗಿದೆ. ಇನ್ನು ದೇವಾಲಯದ ಪ್ರವೇಶ ದ್ವಾರದಲ್ಲಿ ಬಪ್ಪನಾಡಿನ ದೊಡ್ಡ ಡೋಲು ಇದೆ. ದೇವತೆಯ ಗೌರವಾರ್ಥವಾಗಿ ವಾರ್ಷಿಕ ಉತ್ಸವದ ಸಮಯದಲ್ಲಿ ಡೋಲು ಬಡಿಯುವ ಸಮಾರಂಭ ನಡೆಯುತ್ತದೆ. ಉಳಿದಂತೆ ನಾಗದೇವರ, ಕ್ಷೇತ್ರಪಾಲ, ಗಣಪತಿಯ ಸಾನಿಧ್ಯವೂ ಇಲ್ಲಿದೆ. ಶ್ರೀ ಸನ್ನಿಧಿಯಲ್ಲಿ ನವರಾತ್ರಿಯ ಸಂದರ್ಭ ಪ್ರತಿ ದಿನ ಚಂಡಿಕಾಯಾಗ, ಮಹಾಪೂಜೆ, ಸಾರ್ವಜನಿಕ ಅನ್ನ ಸಂತರ್ಪಣೆ, ಸುವಾಸಿನಿ ಪೂಜೆ, ರಂಗ ಪೂಜೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತದೆ. ಪ್ರತಿ ದಿನ ಶ್ರೀ ದೇವಿಯನ್ನು ವಿವಿಧ ಅಲಂಕಾರಗಳೊಂದಿಗೆ ಶೃಂಗರಿಸಿ ಪೂಜೆ ನಡೆಸಲಾಗುತ್ತದೆ.