ಉಡುಪಿ: ಉದ್ಯಮಿಯೊಬ್ಬರಿಗೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡುವುದಾಗಿ ಕೋಟ್ಯಂತರ ರೂಪಾಯಿ ವಂಚಿಸಿದ್ದ ಸಾಮಾಜಿಕ ಹೋರಾಟಗಾರ್ತಿ, ಹಿಂದೂ ನಾಯಕಿ ಚೈತ್ರಾ ಕುಂದಾಪುರ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ನಿನ್ನೆ ತಡರಾತ್ರಿ ಉಡುಪಿಯ ಶ್ರಿಕೃಷ್ಣ ಮಠದ ಪಾರ್ಕಿಂಗ್ ಸ್ಲಾಟ್ ನಲ್ಲಿ ಚೈತ್ರಾ ಕುಂದಾಪುರ ಹಾಗೂ ಇನ್ನೋರ್ವರನ್ನು ಬಂಧಿಸಲಾಗಿದೆ. ಇದಕ್ಕೂ ಮುನ್ನ ಚೈತ್ರಾ ಕುಂದಾಪುರ ಮುಸ್ಲಿಂ ಗೆಳತಿ, ಕಾಂಗ್ರೆಸ್ ಮಾಧ್ಯಮ ವಕ್ತಾರೆ ಅಂಜುಂ ಮನೆಯಲ್ಲಿ ಅವಿತುಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಆರೋಪಿ ಚೈತ್ರಾ ಕುಂದಾಪುರಗೆ ಆಶ್ರಯ ನೀಡಿದ ಆರೋಪದ ಮೇಲೆ ಇದೀಗ ಕಾಂಗ್ರೆಸ್ ವಕ್ತಾರೆಗೂ ಸಂಕಷ್ಟ ಎದುರಾಗಿದ್ದು, ಕಾಂಗ್ರೆಸ್ ಮಾಧ್ಯಮ ವಕ್ತಾರೆ ಅಂಜುಂ ಅವರಿಗೆ ಬೆಂಗಳೂರು ಸಿಸಿಬಿ ಪೊಲೀಸರು ನೋಟೀಸ್ ನೀಡಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಬೈಂದೂರಿನ ಉದ್ಯಮಿ ಗೋವಿಂದ ಬಾಬು ಎಂಬುವವರಿಗೆ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ನೀಡುವುದಾಗಿ ಹೇಳಿ ನಕಲಿ ಬಿಜೆಪಿ ಕೇಂದ್ರ ನಾಯಕರನ್ನು ಸೃಷ್ಟಿಸಿ, ನಾಟಕ ಮಾಡಿ 7 ಕೋಟಿ ರೂಪಾಯಿ ಹಣ ವಂಚಿಸಿದ್ದರು. ಈ ಕುರಿತು ಉದ್ಯಮಿ, ಚೈತ್ರಾ ಕುಂದಾಪುರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದರು.