ಕೃಷಿ ಕ್ಷೇತ್ರವು ದೇಶದ ಉತ್ಪಾದನಾ ವಲಯದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರಿಗೆ ಉದ್ಯೋಗ ಕೊಟ್ಟಿರುವ ಕ್ಷೇತ್ರವಾಗಿದೆ. ದೇಶದ ಕೃಷಿ ಕ್ಷೇತ್ರದಲ್ಲಿ ತೊಡಗಿರುವ ಮಂದಿಯ ಪೈಕಿ 63% ಮಹಿಳೆಯರೇ ಆಗಿದ್ದಾರೆ.
ಒಟ್ಟಾರೆ ಉತ್ಪಾದನಾ ವಲಯದಲ್ಲಿ ಮಹಿಳೆಯರ ಭಾಗಿದಾರಿಕೆ 11.2%ನಷ್ಟಿದೆ ಎಂದು ಕಾಲಿಕ ಕಾರ್ಮಿಕ ಪಡೆ ಸಮೀಕ್ಷೆ (ಪಿಎಲ್‌ಎಫ್‌ಎಸ್) ವಾರ್ಷಿಕ ವರದಿ 2021-22 ರಿಂದ ತಿಳಿದು ಬಂದಿದೆ.
ಕಾರ್ಮಿಕ ಪಡೆಯಲ್ಲಿ ಮಹಿಳಾ ಪ್ರಾತಿನಿಧ್ಯತೆಯನ್ನು ಹೆಚ್ಚಿಸಿ, ಉದ್ಯೋಗದಲ್ಲಿ ಗುಣಮಟ್ಟ ಹೆಚ್ಚಿಸಲು ಸರ್ಕಾರವು ಅನೇಕ ಕ್ರಮಗಳನ್ನು ತೆಗೆದುಕೊಂಡಿದ್ದು, ಈ ಸಂಬಂಧ ಕಾರ್ಮಿಕ ಕಾನೂನುಗಳಲ್ಲಿ ಸುಧಾರಣೆಗಳನ್ನು ಸಹ ತಂದಿದೆ.
ವೇತನಸಹಿತ ತಾಯ್ತನದ ರಜೆಯನ್ನು 12 ವಾರಗಳಿಂದ 26 ವಾರಗಳವರೆಗೆ ವಿಸ್ತರಿಸುವುದು, 50ಕ್ಕಿಂತ ಹೆಚ್ಚಿನ ಉದ್ಯೋಗಿಗಳಿರುವ ಸಂಸ್ಥೆಗಳಲ್ಲಿ ಶಿಶುವಿಹಾರದ ಸೌಲಭ್ಯ ಒದಗಿಸುವುದು, ಸೂಕ್ತ ಸುರಕ್ಷತಾ ಕ್ರಮಗಳೊಂದಿಗೆ ರಾತ್ರಿಯ ಶಿಫ್ಟ್‌ಗಳಲ್ಲಿ ಮಹಿಳೆಯರಿಗೆ ಕೆಲಸ ಮಾಡಲು ಅನುವು ಮಾಡಿಕೊಡುವುದು ಸೇರಿದಂತೆ ಮಹಿಳಾ ಕಾರ್ಮಿಕರಿಗೆ ಸುರಕ್ಷಿತ ಹಾಗೂ ಸೌಹಾರ್ದಯುತ ಕೆಲಸದ ವಾತಾವರಣಗಳನ್ನು ಸೃಷ್ಟಿಸಲು ಕಾರ್ಮಿಕ ಕಾಯಿದೆಗಳಲ್ಲಿ ಸುಧಾರಣೆಗಳನ್ನು ತರಲಾಗಿದೆ.
ವೇತನದ ವಿಚಾರದಲ್ಲಿ, ಒಂದೇ ರೀತಿಯ ಕೆಲಸ ಮಾಡುವ ಪುರುಷರು ಹಾಗೂ ಮಹಿಳೆಯರ ನಡುವೆ ಯಾವುದೇ ರೀತಿಯ ತಾರತಮ್ಯ ಮಾಡುವಂತಿಲ್ಲ ಎಂದು ಸಮಾನ ವೇತನ ಕಾಯಿದೆ, 1976ಕ್ಕೆ ಇನ್ನಷ್ಟು ಸುಧಾರಣೆಗಳನ್ನು ತಂದು ವೇತನಗಳ ಕಾಯಿದೆ, 2019ರಲ್ಲಿ ಸೇರಿಸಲಾಗಿದೆ.
ಉದ್ಯೋಗ ಹಾಗೂ ನಿರುದ್ಯೋಗಗಳ ಪ್ರಮುಖ ಸೂಚಕಗಳಾದ ಕಾರ್ಮಿಕ ಪಡೆಯ ಭಾಗೀದಾರಿಕೆ (ಎಲ್‌ಎಫ್‌ಪಿಆರ್), ಕಾರ್ಮಿಕ ಜನಸಂಖ್ಯೆ ಅನುಪಾತ (ಡಬ್ಲ್ಯೂಪಿಆರ್), ನಿರುದ್ಯೋಗದ ದರ (ಯೂಆರ್) ಇತ್ಯಾದಿಗಳನ್ನು ಪಿಎಲ್‌ಎಫ್‌ಎಸ್ ಪ್ರಕಟಿಸುತ್ತದೆ.