ಬೆಂಗಳೂರು: ನವಜಾತ ಶಿಶುಗಳನ್ನು ಮಾರಾಟ ಮಾಡುತ್ತಿದ್ದ ಗ್ಯಾಂಗ್ ನ್ನು ಬಂದಿಸಿದ್ದ ಪೊಲೀಸರು ಇದೀಗ ಈ ಗ್ಯಾಂಗ್ ಜೊತೆ ಇದ್ದ ನಕಲಿ ಡಾಕ್ಟರ್ ಓರ್ವರನ್ನು ಬಂಧಿಸಿದ್ದಾರೆ.
ಎರಡು ದಿನಗಳ ಹಿಂದೆ ಬೆಂಗಳೂರಿನ ಆರ್.ಆರ್.ನಗರದಲ್ಲಿ ಹಸುಗೂಸು ಮಾರಾಟ ಮಾಡುತ್ತಿದ್ದ ತಮಿಳುನಾಡು ಮೂಲದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಈ ಗ್ಯಾಂಗ್ ಹಿಂದೆ ಶಿಶು ಮಾರಾಟ ಮಾಡುವ ಬೃಹತ್ ಜಾಲವೇ ಇರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ತನಿಖೆ ನಡೆಸಿದ ಪೊಲೀಸರು ಶಿಶು ಮಾರಾಟ ಪ್ರಕರಣದಲ್ಲಿ ಇದೀಗ ನಕಲಿ ಡಾಕ್ಟರ್ ನನ್ನು ಬಂಧಿಸಿದ್ದಾರೆ. ಕೆವಿನ್ ಬಂಧಿತ ಆರೋಪಿ.
3ನೇ ವರ್ಷಕ್ಕೆ ಎಂಬಿಬಿಎಸ್ ಕೋರ್ಸ್ ನಿಲ್ಲಿಸಿದ್ದ ಆರೋಪಿ ಎಂಬಿಬಿಎಸ್ ಪಾಸ್ ಆಗದೇ ಡಾಕ್ಟರ್ ಕೆವಿನ್ ಎಂದು ಬೋರ್ಡ್ ಹಾಕಿಕೊಂಡು ಕ್ಲಿನಿಕ್ ನಡೆಸುತ್ತಿದ್ದ. ರೋಗಿಗಳಿಗೆ ಟ್ರೀಟ್ ಮೆಂಟ್ ಕೂಡ ಕೊಡುತ್ತಿದ್ದ.
ಅಲ್ಲದೇ ಶಿಶು ಮಾರಾಟ ಕೇಸ್ ನಲ್ಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದ. ಬರ್ತ್ ಸರ್ಟಿಫಿಕೇಟ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಸೃಷ್ಟಿಸಿ ಕೊಡುತ್ತಿದ್ದ. ಬಂಧಿತ ಆರೋಪಿ ಕೆವಿನ್ ಹಸುಗೂಸುಗಳನ್ನು ಮಾರಾಟ ಮಾಡಿದ್ದ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಸಿಸಿಬಿ ಪೊಲೀಸರು ನಕಲಿ ವೈದ್ಯ ಕೆವಿನ್ ನನ್ನು ಬಂಧಿಸಿದ್ದಾರೆ.