ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ಭೋಲೆ ಬಾಬಾ ಅಲಿಯಾಸ್ ಸೂರಜ್‌ಪಾಲ್ ಪ್ರವಚನದ ವೇಳೆ ಕಾಲ್ತುಳಿತದಲ್ಲಿ ಅಮಾಯಕರು ಬಲಿಯಾಗಿದ್ದಾರೆ. ಈ ಘಟನೆ ನಡೆದ ನಂತ್ರ ಭೋಲೆ ಬಾಬಾ ಹುಡುಕಾಟ ಮುಂದುವರೆದಿದೆ. ಈ ಮಧ್ಯೆ ಅವರ ಅನುಯಾಯಿಯೊಬ್ಬರು ಆಘಾತಕಾರಿ ವಿಷ್ಯವನ್ನು ಹೊರಹಾಕಿದ್ದಾರೆ.
ಭೋಲೆ ಬಾಬಾ ಸತ್ತ ನನ್ನ ಪತ್ನಿಯನ್ನು ಬದುಕಿಸಿದ್ದಾರೆಂದು ಭಕ್ತನೊಬ್ಬ ಹೇಳಿದ್ದಾನೆ. ಸಂಭಾಲ್ ಜಿಲ್ಲೆಯ ಕಾಶಿಪುರ್ ಗ್ರಾಮದ ನಿವಾಸಿಯಾದ ದೀಪಕ್ ಅಲಿಯಾಸ್ ದೇವೇಂದ್ರ, ತನ್ನ ಜೀವನದಲ್ಲಿ ನಡೆದ ಪವಾಡವನ್ನು ಹೇಳಿದ್ದಾನೆ.
2020ರಲ್ಲಿ ರಾಜಸ್ಥಾನದ ದೌಸಾದಲ್ಲಿ ಪ್ರವಚನ ಕೇಳುವ ಸಮಯದಲ್ಲಿ ಪತ್ನಿ ಮೂರ್ಛೆ ಹೋಗಿದ್ದಳು. ಆಕೆಯನ್ನು ಪರಿಶೀಲನೆ ನಡೆಸಿದ ವೈದ್ಯರು, ಪತ್ನಿ ಸಾವನ್ನಪ್ಪಿದ್ದಾಳೆ ಎಂದಿದ್ದರು. ಈ ಸಮಯದಲ್ಲಿ ಅಲ್ಲಿಗೆ ಬಂದ ಭೋಲೆ ಬಾಬಾ ವಿಶ್ವಹರಿಯ ಮಂತ್ರವನ್ನು ಪಠಿಸಿದ್ರು. ಬಾಬಾ ಸೂರಜ್ಪಾಲ್ ಆಶೀರ್ವಾದ ಮಾಡಿದ ನೀರನ್ನು ಅರ್ಪಿಸಿದ ನಂತರ ಪತ್ನಿಗೆ ಮತ್ತೆ ಜೀವ ಬಂತು ಎಂದು ಆತ ಹೇಳಿದ್ದಾನೆ. ಆದ್ರೆ ಇದಕ್ಕೆ ಆತನ ಬಳಿ ಯಾವುದೇ ಸಾಕ್ಷ್ಯವಿಲ್ಲ.
ಜುಲೈ 2 ರಂದು ಹತ್ರಾಸ್‌ನಲ್ಲಿ ನಡೆದ ಕಾಲ್ತುಳಿತದಲ್ಲಿ 116ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಘಟನೆಗೆ ಸಂಬಂಧಿಸಿದಂತೆ ದೇವಪ್ರಕಾಶ್ ಮಧುಕರ್ ಎಂಬುವವರನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಆದ್ರೆ ಭೋಲೆ ಬಾಬಾ ನಾಪತ್ತೆಯಾಗಿದ್ದಾನೆ.