ಕೊಪ್ಪಳ: ತುಂಗಭದ್ರಾ ಡ್ಯಾಂ ನ 19ನೇ ಕ್ರಸ್ಟ್ ಗೇಟ್ ಮುರಿದುಬಿದ್ದು ಕೊಚ್ಚಿ ಹೋದ ಘಟನೆ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ನಾಯಕರು ಇಂದು ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಬಳಿಯ ತುಂಗಭದ್ರಾ ಡ್ಯಾಂ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಭೇಟಿ ಬಳಿಕ ಮಾತನಾಡಿದ ಬಿ.ವೈ.ವಿಜಯೇಂದ್ರ, ರಾಜ್ಯ ಸರ್ಕಾರದ ಹೊಣೆಗೇಡಿತನದಿಂದ ಡ್ಯಾಂ ನ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿದೆ. ನಾಲ್ಕು ಜಿಲ್ಲೆಗಳ ರೈತರು, ಗ್ರಾಮಸ್ಥರು ಪ್ರವಾಹದ ಆತಂಕದಲ್ಲಿದ್ದಾರೆ. ಬೆಳೆಗಳು ಹಾನಿಯಾಗಿವೆ. ಪ್ರತಿ ಹೆಕ್ಟೇರ್ ಗೆ 50 ಸಾವಿರ ರೂಪಾಯಿಯಂತೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ತುಂಗಭದ್ರಾ ಡ್ಯಾಂ ಕಲ್ಯಾಣ ಕರ್ನಾಟಕದ ಜೀವನಾಡಿಯಾಗಿದೆ. ಈ ಡ್ಯಾಂ ನೀರಿನಿಂದ ನಾಲ್ಕು ಜಿಲ್ಲೆಗಳಲ್ಲಿ ಭತ್ತ ಬೆಳೆಯಲಾಗುತ್ತದೆ. ಕಳೆದ ಬಾರಿ ಬರಗಾಲದಿಂದ ರೈತರು ಕಂಗಾಲಾಗಿದ್ದರು. ಈಗ ಗೇಟ್ ಕಳಚಿ ಬಿಬ್ಬಿದ್ದರಿಂದ ರೈತರು ಆತಂಕಕ್ಕೀಡಾಗಿದ್ದಾರೆ. ಅಧಿಕಾರಿಗಳು ಸರಿಯಾಗಿ ಕ್ರಮ ಕೈಗೊಳ್ಳದಿರುವುದೇ ಘಟನೆಗೆ ಕಾರಣ. ಆದರೆ ಡಿಸಿಎಂ ಡಿ.ಕೆ.ಶಿವಕುಮಾರ್ ಅಧಿಕಾರಿಗಳನ್ನು ಹೊಣೆ ಮಾಡಲ್ಲ ಎಂದಿದ್ದಾರೆ. ಹಾಗಾದರೆ ಯಾರನ್ನು ಹೊಣೆ ಮಾಡ್ತೀರಿ? ಈ ಘತನೆಯ ಹೊಣೆಯನ್ನು ರಾಜ್ಯ ಸರ್ಕಾರವೇ ಹೊರಬೇಕು ಎಂದು ಕಿಡಿಕಾರಿದ್ದಾರೆ.