ಶಿವಮೊಗ್ಗ: ಅಪ್ರಾಪ್ತ ಮಗನಿಗೆ ಪ್ರಯಾಣಿಕರ ಆಟೋ ಚಾಲನೆ ಮಾಡಲು ಅವಕಾಶ ನೀಡಿದ್ದ ತಂದೆಗೆ ಶಿವಮೊಗ್ಗದ ನಾಲ್ಕನೇ ಹೆಚ್ಚುವರಿ ಜೆಎಂಎಫ್ ನ್ಯಾಯಾಲಯ 26 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.
ಮೇ 25 ರಂದು ರಾತ್ರಿ ಶಿವಮೊಗ್ಗದ ತುಂಗಾನಗರದಲ್ಲಿ ಆಟೋರಿಕ್ಷಾ ಮತ್ತು ಕ್ಯಾಂಟರ್ ನಡುವೆ ಅಪಘಾತ ಸಂಭವಿಸಿತ್ತು. ಪ್ಯಾಸೆಂಜರ್ ಆಟೋವನ್ನು 17ವರ್ಷದ ಬಾಲಕ ಚಾಲನೆ ಮಾಡುತ್ತಿರುವುದು ಕಂಡು ಬಂದಿದ್ದು, ಈ ಬಗ್ಗೆ ಶಿವಮೊಗ್ಗದ ಪಶ್ಚಿಮ ಸಂಚಾರ ಠಾಣೆ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಬಾಲಕನ ತಂದೆ ಅಗಸವಳ್ಳಿಯ ಸತೀಶ್(44) ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿತ್ತು. ಬಾಲಕನಿಗೆ ಆಟೋ ಓಡಿಸಲು ಸತೀಶ್ ಅವಕಾಶ ಮಾಡಿಕೊಟ್ಟಿದ್ದರು. ಅಲ್ಲದೆ ಆಟೋ ಎಮಿಷನ್ ಟೆಸ್ಟ್ ಕೂಡ ಮಾಡಿಸಿರಲಿಲ್ಲ. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪ್ರಾಪ್ತನಿಗೆ ಆಟೋ ಓಡಿಸಲು ಕೊಟ್ಟ ಕಾರಣಕ್ಕೆ 25,000 ರೂ. ಮತ್ತು ಹೊಗೆ ತಪಾಸಣೆ ಮಾಡಿಸದ ಹಿನ್ನೆಲೆಯಲ್ಲಿ ಒಂದು ಸಾವಿರ ಸೇರಿ ಒಟ್ಟು 26 ಸಾವಿರ ದಂಡ ವಿಧಿಸಲಾಗಿದೆ.