ನವದೆಹಲಿ: ಆರೋಗ್ಯ ವಿಮೆ ಪಡೆದುಕೊಳ್ಳಲು ಇದ್ದ 65 ವರ್ಷಗಳ ವಯೋಮಿತಿಯನ್ನು ರದ್ದು ಮಾಡಿ ಭಾರತೀಯ ವಿಮಾನ ನಿಯಂತ್ರಣ ಪ್ರಾಧಿಕಾರ ಆದೇಶ ಹೊರಡಿಸಿದೆ.
ಇನ್ನು ಮುಂದೆ 65 ವರ್ಷ ಮೇಲ್ಪಟ್ಟವರು ಕೂಡ ಸುಲಭವಾಗಿ ಆರೋಗ್ಯ ವಿಮೆ ಪಡೆದುಕೊಳ್ಳಬಹುದು. ಆರೋಗ್ಯ ವಿಮೆಗೆ ಇದ್ದ ವಯೋಮಿತಿ ರದ್ದು ಮಾಡಿದ್ದು, ಎಲ್ಲಾ ವಯಸ್ಸಿನವರಿಗೆ ಹೊಂದುವಂತಹ ವಿಮೆ ನೀಡಬೇಕು. ಪೂರ್ವ ಆರೋಗ್ಯ ಸಮಸ್ಯೆಗಳಿಗೆ ವಿಮೆ ಪಡೆದ ಬಳಿಕ ಇರುತ್ತಿದ್ದ ಅವಧಿ 48 ತಿಂಗಳಿನಿಂದ 36 ತಿಂಗಳಿಗೆ ಇಳಿಸಲಾಗಿದ್ದು, ಗ್ರಾಹಕರಿಗೆ ಲಾಭ ತರುವಂತಹ ಸೂಚನೆಗಳನ್ನು ಪ್ರಾಧಿಕಾರ ನೀಡಿದೆ.
ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ಮಕ್ಕಳು, ಹೆರಿಗೆ ಅಥವಾ ಇನ್ನು ಯಾವುದೇ ವಿಭಾಗಗಳಿಗೆ ಪ್ರತ್ಯೇಕ ವಿಮಾ ಉತ್ಪನ್ನಗಳನ್ನು ವಿಮಾ ಕಂಪನಿಗಳು ಬಿಡುಗಡೆ ಮಾಡಬಹುದು. ಯಾವುದೇ ರೀತಿಯ ಪೂರ್ವ ಆರೋಗ್ಯ ಸಮಸ್ಯೆ ಹೊಂದಿದ್ದರೂ ಅಂತವರಿಗೆ ವಿಮಾ ಕಂಪನಿಗಳು ಸೇವೆ ನಿರಾಕರಿಸುವಂತಿಲ್ಲ. ಕ್ಯಾನ್ಸರ್, ಹೃದಯ ಸಮಸ್ಯೆ, ಏಡ್ಸ್ ಮೊದಲಾದ ಆರೋಗ್ಯ ಸಮಸ್ಯೆ ಇರುವವರು ಕೂಡ ಆರೋಗ್ಯ ವಿಮೆ ಪಡೆಯಬಹುದು.
ವಿಮೆ ನೀಡುವಾಗ ಕಂಪನಿಗಳು ವಿಮೆ ವ್ಯಾಪ್ತಿಗೆ ಎಲ್ಲಾ ರೀತಿಯ ಆರೋಗ್ಯ ಸಮಸ್ಯೆ ಸೇರ್ಪಡೆ ಮಾಡಬೇಕು. ಪೂರ್ವ ಆರೋಗ್ಯ ಸಮಸ್ಯೆಗಳನ್ನು ವಿಮೆ ವ್ಯಾಪ್ತಿಯಿಂದ ಹೊರಗೆ ಇಡುವಂತಿಲ್ಲ ಎಂದು ಹೇಳಲಾಗಿದೆ.