ಬಹಳಷ್ಟು ಹೆಂಗಸರಿಗೆ ದೇವರು ಕೊಟ್ಟಿರುವ ರೂಪಕ್ಕಿಂತಲೂ ಸಿನೆಮಾಗಳಲ್ಲಿ ಬರುವ ಮಂದಿಯಂತೆ ಕಾಣುವುದರ ಮೇಲೆಯೇ ಆಸೆ ಜೋರು. ಸಹಜವಾಗಿಯೇ ಅಂದವಾಗಿರುವ ಮುಖಕ್ಕೆ ಕೃತಕವಾದ ಮಾರ್ಪಾಡುಗಳನ್ನು ಮಾಡಿಕೊಳ್ಳುವ ಟ್ರೆಂಡ್ ಇಂದು ನಿನ್ನೆಯದಲ್ಲ.
ಬಾರ್ಬಿ ಗೊಂಬೆಯಂತೆ ಕಾಣಬೇಕೆಂಬ ಹಂಬಲ ಬಹಳಷ್ಟು ಹೆಣ್ಣು ಮಕ್ಕಳಿಗೆ ಬಾಲ್ಯದಿಂದ ಇರುತ್ತದೆ. ಬಹಳಷ್ಟು ಮಕ್ಕಳಿಗೆ ಬಾರ್ಬಿ ಡಾಲ್ ಹೊಂದುವುದು ಇಷ್ಟದ ವಿಚಾರ. ಆದರೆ ದೊಡ್ಡವರಾಗುತ್ತಲೇ ಬಾರ್ಬಿ ಗೊಂಬೆಯ ಮೇಲಿನ ಮೋಹ ಕಡಿಮೆಯಾಗುತ್ತದೆ.
ಆದರೆ ಇಲ್ಲೊಬ್ಬಳು ಯುವತಿ ತನ್ನ ಮುಖ ಬಾರ್ಬಿ ಗೊಂಬೆಯಂತೆ ಕಾಣಲಿ ಎಂದು $100,000ಕ್ಕಿಂತ ಹೆಚ್ಚು (82,68,000 ರೂ.) ವ್ಯಯಿಸಿದ್ದಾಳೆ.
ಜಾಜ಼್ಮಿನ್ ಫಾರ‍್ರೆಸ್ಟ್ ಹೆಸರಿನ 25 ವರ್ಷದ ಈ ಯುವತಿ ಆಸ್ಟ್ರೇಲಿಯಾದ ಕ್ವೀನ್ಸ್‌ಲೆಂಡ್‌ನಾಕೆ. ಬಾರ್ಬಿ ಗೊಂಬೆಯಂತೆ ಕಾಣುವ ಹಂಬಲದಿಂದ ಸಾಕಷ್ಟು ಬಾರಿ ಪ್ಲಾಸ್ಟಿಕ್ ಹಾಗೂ ಕಾಸ್ಮೆಟಿಕ್ ಸರ್ಜರಿಗೆ ಒಳಗಾಗಿದ್ದಾಳೆ ಈಕೆ. ತನ್ನ 18ನೇ ವಯಸ್ಸಿನಲ್ಲಿ ಲಾಸ್ ಏಂಜಲೀಸ್‌ನಲ್ಲಿ ಹಾಲಿಡೇ ಮೂಡ್‌ನಲ್ಲಿದ್ದ ಈಕೆ, ಆಗ ಮೊದಲ ಬಾರಿಗೆ ಇಂಥದ್ದೊಂದು ಚಿಕಿತ್ಸೆ ಮಾಡಿಸಿಕೊಂಡು ಸ್ತನದ ಗಾತ್ರದಲ್ಲಿ ಬದಲಾವಣೆ ಮಾಡಿಸಿಕೊಂಡಿದ್ದಳು.
ಕಳೆದ ವರ್ಷ ಸಹ ಈ ಚಿಕಿತ್ಸೆಯನ್ನು ಮತ್ತೊಮ್ಮೆ ಮಾಡಿಸಿಕೊಂಡ ಈಕೆಗೆ ಇಂಥ ’ಕನಸಿನ ಶಸ್ತ್ರಚಿಕಿತ್ಸೆಗಳ’ ದೊಡ್ಡ ಪಟ್ಟಿಯೇ ಇದೆ.
ಸ್ತನದ ಗಾತ್ರದಲ್ಲಿ ಮಾರ್ಪಾಡಿನೊಂದಿಗೆ, ಲಿಪ್ ಫಿಲ್ಲರ್‌ಗಳು, ಕೆನ್ನೆಗಳಿಗೆ ಫಿಲ್ಲರ್‌ಗಳು, ನಾಸೋಲಾಬಿಯಲ್ ಫೋಲ್ಡ್‌ಗಳು, ಗಲ್ಲ, ದವಡೆ ಹಾಗೂ ತಲೆಗೆ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದು, ಅನೇಕ ಬಟೊಕ್ಸ್ ಇಂಜೆಕ್ಷನ್‌ಗಳನ್ನೂ ಸಹ ಪಡೆದುಕೊಂಡಿದ್ದಾಳೆ.