2017ರಲ್ಲಿ ಬಿಎಂಸಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಆರೋಪವು ಸಾಬೀತಾದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ತಮಿಳ್ ಸೆಲ್ವನ್ ಹಾಗೂ ಇತರೆ ನಾಲ್ವರಿಗೆ ಆರು ತಿಂಗಳ ಜೈಲು ಶಿಕ್ಷೆ ಹಾಗೂ ತಲಾ 13,500 ರೂಪಾಯಿ ದಂಡವನ್ನು ವಿಧಿಸಿ ವಿಶೇಷ ನ್ಯಾಯಾಲಯ ಆದೇಶವನ್ನು ಹೊರಡಿಸಿದೆ.
ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಆರ್.ಎನ್. ರೋಕಡೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಗಲಭೆ, ಕಾನೂನುಬಾಹಿರ ಸಭೆ, ಕರ್ತವ್ಯ ನಿರತ ಸಾರ್ವಜನಿಕ ನೌಕರಿಗೆ ಹಲ್ಲೆ ಮಾಡಿದ ಪ್ರಕರಣಗಳ ಅಡಿಯಲ್ಲಿ ದೋಷಿ ಎಂದು ತೀರ್ಪು ನೀಡಿದ್ದಾರೆ.
ಇನ್ನು ಕೋರ್ಟ್ನ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲು ಅವಕಾಶ ನೀಡುವುದನ್ನೂ ಅಮಾನತುಗೊಳಿಸಿದೆ. 2017ರಲ್ಲಿ ಮಧ್ಯ ಮುಂಬೈನ ಸಿಯಾನ್ ಕೋಳಿವಾಡ ಪ್ರದೇಶದಲ್ಲಿ ಅಕ್ರಮ ವಿದ್ಯುತ್ ಮತ್ತು ನೀರಿನ ಸಂಪರ್ಕ ಕಡಿತಗೊಳಿಸಲು ಬಿಎಂಸಿ ಅಧಿಕಾರಿಗಳು ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿತ್ತು.