ಅಸ್ಸಾಂನಾದ್ಯಂತ ಬಿಹು ನೃತ್ಯಕ್ಕೆ ವಿಶೇಷ ಪ್ರಾಧಾನ್ಯತೆ ಇದೆ. ಈ ಕಲಾವಿದೆಯರಲ್ಲಿ ಒಬ್ಬಾಕೆ 17 ವರ್ಷದ ಪ್ರಿಯಾಖಿ ಶರ್ಮಾ. ಬಾಲ್ಯದಿಂದಲೂ ಬಿಹು ನಾಸ್ (ನೃತ್ಯ) ಪ್ರದರ್ಶಿಸುತ್ತಿದ್ದಾಳೆ. ಈ ಬಾರಿ ವಿಶೇಷವೊಂದನ್ನು ಯೋಜಿಸಬೇಕೆಂದು ನಿರ್ಧರಿಸಿದ್ದಾಳೆ ಈಕೆ.
ಅದರ ಫಲವಾಗಿ ಬಿಹು ಗಿನ್ನೆಸ್ ದಾಖಲೆಯತ್ತ ದಾಪುಗಾಲು ಹಾಕಲು ಸಜ್ಜಾಗಿದೆ. ರಾಜ್ಯದ 11 ಸಾವಿರಕ್ಕೂ ಹೆಚ್ಚು ಕಲಾವಿದರು ವಿಶ್ವ ದಾಖಲೆಯನ್ನು ಸ್ಥಾಪಿಸಲು ಪಣ ತೊಟ್ಟಿದ್ದಾರೆ.
ಬಿಹು ನಾಸ್, ರೊಂಗಾಲಿ ಬಿಹು ಅಥವಾ ಬೊಹಾಗ್ ಬಿಹು ಎಂದೆಲ್ಲಾ ಕರೆಸಿಕೊಳ್ಳುವ ಬಿಹುವಿನ ವಿಶ್ವ ದಾಖಲೆ ಮಾಡಲು ವೇದಿಕೆ ಸಜ್ಜಾಗಿದೆ. ಇಂದು ಅಂದರೆ ಏ. 14 ರಂದು ರಾಜ್ಯದ ಎಲ್ಲಾ ಜಿಲ್ಲೆಗಳ 11,140 ಕಲಾವಿದರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ಗುವಾಹಟಿಯ ಸರುಸಜೈ ಕ್ರೀಡಾಂಗಣದಲ್ಲಿ ಒಟ್ಟಾಗಿ ಪ್ರದರ್ಶನ ನೀಡಲಿದ್ದಾರೆ. ಈ ಮೂಲಕ ಇದು ಗಿನ್ನೆಸ್ ದಾಖಲೆಯ ಪುಟಕ್ಕೆ ಸೇರಲಿದೆ.