ಆಸ್ಪತ್ರೆಗಳಲ್ಲಿನ ತೀವ್ರ ನಿಗಾ ಘಟಕ ಪ್ರವೇಶಿಸುವ ವೇಳೆ ರೋಗಿಗಳನ್ನು ಸಂದರ್ಶಿಸಲು ಬರುವ ಎಲ್ಲರಿಗೂ ಪಾದರಕ್ಷೆ ತೆಗೆಯುವಂತೆ ಸೂಚಿಸುವುದು ಸಾಮಾನ್ಯ ಸಂಗತಿ. ಒಳಗಿರುವ ರೋಗಿಗಳಿಗೆ ಯಾವುದೇ ಸೋಂಕು ತಗುಲಬಾರದೆಂಬ ಕಾರಣಕ್ಕೆ ವೈದ್ಯರು ಈ ರೀತಿಯಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಾರೆ. ಆದರೆ ಇದೇ ವಿಚಾರ ಉತ್ತರ ಪ್ರದೇಶದ ಲಕ್ನೋದಲ್ಲಿ ದೊಡ್ಡ ವಿವಾದವೊಂದಕ್ಕೆ ಕಾರಣವಾಗಿದೆ.
ಹೌದು, ಲಕ್ನೋದ ಮೇಯರ್ ಸುಷ್ಮಾ ಖಾರಕ್ವಾಲಾ, ಪಾಲಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಾಜಿ ಸೈನಿಕರೊಬ್ಬರು ಅನಾರೋಗ್ಯದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಕಾರಣ ಅವರನ್ನು ನೋಡಲು ತಮ್ಮ ಬಳಗದೊಂದಿಗೆ ಹೋಗಿದ್ದಾರೆ. ಈ ವೇಳೆ ಶೂ ತೆಗೆಯುವಂತೆ ಸುಷ್ಮಾ ಅವರಿಗೆ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಸೂಚಿಸಿದ್ದು ಇದರಿಂದ ಮೇಯರ್ ಕೋಪಗೊಂಡರೆಂದು ಹೇಳಲಾಗಿದೆ.
ಈ ವಿಚಾರ ವಾಗ್ವಾದಕ್ಕೆ ಕಾರಣವಾಗಿದ್ದು, ಆ ಸಂದರ್ಭದಲ್ಲಿ ಸಿಟ್ಟಿಗೆದ್ದ ಮೇಯರ್ ಸುಷ್ಮಾ ಸ್ಥಳಕ್ಕೆ ಬುಲ್ಡೋಜರ್ ತರಿಸಿದ್ದಾರೆ. ಅಷ್ಟರಲ್ಲಿ ಪೊಲೀಸರು ಮಧ್ಯ ಪ್ರವೇಶಿಸಿದ ಕಾರಣ ಪರಿಸ್ಥಿತಿ ತಣ್ಣಗಾಯಿತು ಎಂದು ಹೇಳಲಾಗಿದ್ದು, ಆದರೆ ಈ ಘಟನೆ ಕುರಿತಂತೆ ಪ್ರತಿಕ್ರಿಯಿಸಿರುವ ಆಸ್ಪತ್ರೆ ಆಡಳಿತ ಮಂಡಳಿ ಅಂತಹ ಯಾವುದೇ ವಿಚಾರ ನಡೆದಿಲ್ಲ. ಮೇಯರ್ ಆಗಮಿಸಿದ ವೇಳೆ ವೈದ್ಯರು ಸೌಜನ್ಯಯುತವಾಗಿ ನಡೆದುಕೊಂಡಿದ್ದಾರೆ ಎಂದು ಸ್ಪಷ್ಟನೆ ನೀಡಿದೆ.