ಬೆಂಗಳೂರು: ಹುಬ್ಬಳ್ಳಿಯಲ್ಲಿ ಹತ್ಯೆಗೀಡಾದ ಅಂಜಲಿ ಮೋಹನ ಅಂಬಿಗೇರ ಅವರ ಕುಟುಂಬಕ್ಕೆ ಮಾನವೀಯತೆ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಆಶ್ರಯ ಮನೆ ನೀಡಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ವಿಧಾನಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅವರು ವಿಷಯ ಪ್ರಸ್ತಾಪಿಸಿದ್ದು, ಇದಕ್ಕೆ ಉತ್ತರ ನೀಡಿದ ಸಚಿವರು ಆದಷ್ಟು ಶೀಘ್ರವೇ ಅಂಜಲಿ ಅಂಬಿಗೇರ ಕುಟುಂಬದವರಿಗೆ ಮನೆ ಆಶ್ರಯ ಮನೆ ಕೊಡಲಾಗುವುದು ಎಂದು ಹೇಳಿದ್ದಾರೆ.
ಇದೇ ವೇಳೆ ಬಿಜೆಪಿ ಸದಸ್ಯರಾದ ಸಿ.ಟಿ. ರವಿ, ಭಾರತೀ ಶೆಟ್ಟಿ, ಎನ್. ರವಿಕುಮಾರ್ ಹಾಗೂ ಕಾಂಗ್ರೆಸ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಪರಿಹಾರ ಘೋಷಿಸಬೇಕೆಂದು ಆಗ್ರಹಿಸಿದ್ದಾರೆ. ಪ್ರತಿಕ್ರಿಯೆ ನೀಡಿದ ಸಚಿವರು, ಕೊಲೆಯಾದವರ ಕುಟುಂಬಕ್ಕೆ ಪರಿಹಾರ ಕೊಡುವ ಯಾವುದೇ ನಿಯಮವಿಲ್ಲ. ಆದರೂ ಕುಟುಂಬದಲ್ಲಿರುವ ಅಜ್ಜಿ, ಇಬ್ಬರು ಹೆಣ್ಣು ಮಕ್ಕಳಿಗೆ ಜೀವನಕ್ಕಾಗಿ ಪರಿಹಾರ ಕೊಡಲು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.