BIG NEWS: ಗೋಕರ್ಣ ದೇವಾಲಯ ಸಮಿತಿಗೆ ಹೊಸ ಸದಸ್ಯರ ನೇಮಕ: ಸರ್ಕಾರದ ಆದೇಶ ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು: ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ಆಡಳಿತ ನಿರ್ವಹಣೆಗೆ ರಚಿಸಿದ್ದ ಮೇಲ್ವಿಚಾರಣಾ ಸಮಿತಿಗೆ ನಾಲ್ವರು ಸದಸ್ಯರ ನಾಮನಿರ್ದೇಶನ ರದ್ದುಪಡಿಸಿ ಅವರ ಬದಲಿಗೆ ಹೊಸ ಸದಸ್ಯರನ್ನು ನಾಮನಿರ್ದೇಶನ ಮಾಡಿದ್ದ ರಾಜ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್ ರದ್ದು ಮಾಡಿದೆ.

ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಶ್ರೀರಾಮಚಂದ್ರಾಪುರ ಮಠ, ಪೀಠಾಧಿಪತಿ ರಾಘವೇಶ್ವರ ಭಾರತಿ ಸ್ವಾಮೀಜಿ ಮತ್ತು ಸದಸ್ಯ ಸ್ಥಾನ ಕಳೆದುಕೊಂಡಿದ್ದ ವೇದಮೂರ್ತಿ ದತ್ತಾತ್ರೇಯ ನಾರಾಯಣ ಭಟ್ಟ ಹಿರೇಗಂಗೆ ಇತರೆ ಮೂವರು ಸಲ್ಲಿಸಿದ್ದ ಪ್ರತ್ಯೇಕ ತಕರಾರು ಅರ್ಜಿಗಳ ಪುರಸ್ಕರಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ಮಾಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮೊರೆ ಹೋಗಿ ಸೂಕ್ತ ಆದೇಶ ಪಡೆಯಲು ಈ ತೀರ್ಪು ರಾಜ್ಯ ಸರ್ಕಾರಕ್ಕೆ ಯಾವುದೇ ರೀತಿ ಅಡ್ಡಿ ಬರುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಶ್ರೀರಾಮಚಂದ್ರಾಪುರ ಮಠದ ಅಧೀನದ ಗೋಕರ್ಣದ ಮಹಾಬಲೇಶ್ವರ ದೇವಾಲಯವನ್ನು ರಾಜ್ಯ ಮುಜರಾಯಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದತ್ತಿ ಕಾಯ್ದೆ ವ್ಯಾಪ್ತಿಗೆ ತರುವ ಸಂಬಂಧ ರಾಜ್ಯ ಸರ್ಕಾರ 2003ರ ಏಪ್ರಿಲ್ 30 ರಂದು ಅಧಿಸೂಚನೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ, ವ್ಯಾಪ್ತಿಯಿಂದ ಗೋಕರ್ಣ ಮಹಾಬಲೇಶ್ವರ ದೇವಾಲಯವನ್ನು ಹೊರಗಿಡಲು ರಾಮಚಂದ್ರಾಪುರ ಮಠ ಮನವಿ ಮಾಡಿದ್ದು, 2008ರಲ್ಲಿ ಕೆಲವು ದೇವಾಲಯಗಳನ್ನು ಮುಜರಾಯಿ ಇಲಾಖೆಯಿಂದ ಹೊರಗಿಟ್ಟು ಸರ್ಕಾರ ಆದೇಶಿಸಿತ್ತು. ಮಹಾಬಲೇಶ್ವರ ದೇವಾಲಯವನ್ನು ಮಠದ ಅಧೀನಕ್ಕೆ ನೀಡಲಾಗಿತ್ತು.

ಸುಪ್ರೀಂ ಕೋರ್ಟ್ ನಲ್ಲಿ ಮನವಿ ಸಲ್ಲಿಸಿ ಆದೇಶ ಪಡೆದು ಮೇಲ್ವಿಚಾರಣಾ ಸಮಿತಿ ಸದಸ್ಯರನ್ನು ನಾಮನಿರ್ದೇಶನ ಮಾಡಲು ಸರ್ಕಾರಕ್ಕೆ ಸಂಪೂರ್ಣ ಅಧಿಕಾರವಿರುತ್ತದೆ ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಸ್ಪಷ್ಟಪಡಿಸಿದೆ. ದೇವಾಲಯ ಸಮಿತಿಗೆ ನಾಮ ನಿರ್ದೇಶನ ಮಾಡಲು ಸರ್ಕಾರಕ್ಕೆ ಅಧಿಕಾರವಿದ್ದರೂ ಮೇಲ್ವಿಚಾರಣಾ ಸಮಿತಿ ರಚಿಸುವ ಸಂಬಂಧ ಸುಪ್ರೀಂಕೋರ್ಟ್ ಮುಂದಿನ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಹೇಳಲಾಗಿದೆ.

ಆದ್ದರಿಂದ ಈ ಹಿಂದೆ ಇದ್ದ ಸಮಿತಿಯ ಸದಸ್ಯರ ಬದಲಾವಣೆ ಮಾಡಬೇಕಾದರೆ ಅದಕ್ಕೆ ಮೊದಲು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಮನವಿ ಸಲ್ಲಿಸಿ ಹೊಸ ಸದಸ್ಯರ ನೇಮಕಕ್ಕೆ ಅನುಮತಿ ಪಡೆಯಬೇಕಿತ್ತು. ಆದರೆ, ಆ ಕಾರ್ಯ ಮಾಡದೇ ಇತರೆ ಸದಸ್ಯರನ್ನು ನಾಮನಿರ್ದೇಶನ ಮಾಡಲಾಗಿದೆ. ಹೀಗೆ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ ಎಂದು ನ್ಯಾಯಪೀಠ ಹೇಳಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read