alex Certify ʻAPL-BPLʼ ಕಾರ್ಡ್ ಹೊಂದಿರುವವರೇ ಗಮನಿಸಿ : ಈ ಯೋಜನೆಯಡಿ ಸಿಗಲಿದೆ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʻAPL-BPLʼ ಕಾರ್ಡ್ ಹೊಂದಿರುವವರೇ ಗಮನಿಸಿ : ಈ ಯೋಜನೆಯಡಿ ಸಿಗಲಿದೆ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ

ಬಳ್ಳಾರಿ : ಕಡು ಬಡವರು ಸಹಿತ ಉನ್ನತ ಮಟ್ಟದ ಆಸ್ಪತ್ರೆಗಳಲ್ಲಿ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಪಡೆಯಲು ಸರ್ಕಾರ ರೂಪಿಸಿರುವ “ಆಯುಷ್ಮಾನ್ ಭಾರತ್ – ಪ್ರಧಾನಮಂತ್ರಿ ಜನ ಆರೋಗ್ಯ ಯೋಜನಾ – ಮುಖ್ಯಮಂತ್ರಿ ಆರೋಗ್ಯ ಕರ್ನಾಟಕ” ಕಾರ್ಡ್‍ಗಳನ್ನು ಪಡೆದು, ಆರೋಗ್ಯ ಸಮಸ್ಯೆಗಳ ಚಿಕಿತ್ಸಾ ಸಂದರ್ಭದಲ್ಲಿ ಬಿಪಿಎಲ್ ಕುಟುಂಬಗಳಿಗೆ ವಾರ್ಷಿಕ ರೂ.5 ಲಕ್ಷ ಹಾಗೂ ಎಪಿಎಲ್ ಕುಟುಂಬಗಳಿಗೆ 1.5 ಲಕ್ಷದವರೆಗೆ ಉಚಿತ ಚಿಕಿತ್ಸಾ ವೆಚ್ಚದ ಸೌಲಭ್ಯ ಪಡೆದುಕೊಳ್ಳಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೈ.ರಮೇಶ್ ಬಾಬು ಅವರು ತಿಳಿಸಿದ್ದಾರೆ.

ಆಯುಷ್ಮಾನ್ ಭವಃದಡಿ ಆರೋಗ್ಯ ಮೇಳಗಳಲ್ಲಿ ಆಯುಷ್ಮಾನ್ ಕಾರ್ಡ್‍ಗಳಿಗೆ ನೋಂದಾಯಿಸಿಕೊಳ್ಳುವ ಮೂಲಕ ಇದರ ಸದುಪಯೋಗಪಡೆದುಕೊಳ್ಳಬಹುದು. ಮೇಳಗಳಲ್ಲಿ ಅಂಗಾಂಗ ದಾನ ನೋಂದಣಿ ಕುರಿತು ಜಾಗೃತಿ ಸಹ ನೀಡಲಾಗುತ್ತಿದ್ದು, ಪ್ರತಿಯೊಬ್ಬರೂ ನೋಂದಾಯಿಸಿಕೊಳ್ಳಬಹುದಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 1885 ಜನರು ಅಂಗಾಂಗ ದಾನ ನೋಂದಣಿ ಮಾಡಿಕೊಂಡಿದ್ದು, ಬಳ್ಳಾರಿ ಜಿಲ್ಲೆಯು ರಾಜ್ಯಮಟ್ಟದಲ್ಲಿ ಮೊದಲ ಸ್ಥಾನದಲ್ಲಿ ಇದೆ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟುವಿಕೆಗಾಗಿ ಆರೋಗ್ಯ ಮೇಳಗಳಲ್ಲಿ ಪ್ರತಿಯೊಬ್ಬರಿಗೂ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆ 1994ರ ಕುರಿತು ಜಾಗೃತಿ ನೀಡಲಾಗುತ್ತಿದೆ. ಭ್ರೂಣಲಿಂಗ ಪತ್ತೆಗೆ ಸಂಬಂಧಿಸಿದ ಯಾವುದೇ ಜಾಹೀರಾತುಗಳಿಗೆ 3ವರ್ಷ ಜೈಲು ಶಿಕ್ಷೆ ರೂ.10 ಸಾವಿರ ದಂಡ, ವೈದ್ಯರು ಭ್ರೂಣಲಿಂಗ ಪತ್ತೆ ಮಾಡಿದಲ್ಲಿ ಮೊದಲ ಅಪರಾಧಕ್ಕೆ 3ವರ್ಷ ಜೈಲು ಶಿಕ್ಷೆ ಮತ್ತು ರೂ.10 ಸಾವಿರ ದಂಡ, 2ನೇ ಬಾರಿ ಅಪರಾಧಕ್ಕೆ 5ವರ್ಷ ಜೈಲು ಶಿಕ್ಷೆ ರೂ.50 ಸಾವಿರ ದಂಡ ವಿಧಿಸುವ ಅವಕಾಶವಿದೆ. ಅಲ್ಲದೇ ಗರ್ಭಿಣಿ ಮಹಿಳೆಗೆ ಕುಟುಂಬದ ಸದಸ್ಯರು ಭ್ರೂಣಲಿಂಗ ಪತ್ತೆಗೆ ಒತ್ತಾಯಿಸಿದರೆ. ಮೊದಲ ಅಪರಾಧಕ್ಕೆ 3ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ.ದಂಡ, ಪುನಃ 2ನೇ ಬಾರಿ ಭ್ರೂಣಲಿಂಗ ಪತ್ತೆ ಮಾಡಿಸಿದಲ್ಲಿ 5ವರ್ಷ ಜೈಲು ಶಿಕ್ಷೆ ಮತ್ತು ರೂ.1 ಲಕ್ಷ ದಂಡ ವಿಧಿಸಲಾಗುವುದು ಎಂದೂ ಡಿಹೆಚ್‍ಓ ಡಾ.ವೈ ರಮೇಶ್ ಬಾಬು ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಆಯುಷ್ಮಾನ್ ಭವಃ ಅಭಿಯಾನದಡಿಯಲ್ಲಿ ಇಲ್ಲಿಯವರೆಗೆ ಒಟ್ಟು 1918 ಆರೋಗ್ಯ ಮೇಳಗಳನ್ನು ಆಯೋಜಿಸಲಾಗಿದೆ. ಇಲ್ಲಿಯವರೆಗೆ 100118 ಜನರು ತಪಾಸಣೆಗೆ ಒಳಪಟ್ಟಿದ್ದು, ಇವರಲ್ಲಿ 9949 ಗರ್ಭಿಣಿಯರು ಸೇರಿದ್ದಾರೆ. ಶಿಬಿರದಲ್ಲಿ 73674 ಜನಕ್ಕೆ ರಕ್ತದೊತ್ತಡ ಮತ್ತು 70791 ಜನರಿಗೆ ಮಧುಮೇಹ ಪರೀಕ್ಷೆ ಕೈಗೊಳ್ಳಲಾಗಿದೆ ಎಂದಿದ್ದಾರೆ.

ಅಲ್ಲದೇ 39970 ಜನರಿಗೆ ಬಾಯಿ ಕ್ಯಾನ್ಸರ್, 12380 ಜನರಿಗೆ ಸ್ತನ ಕ್ಯಾನ್ಸರ್, 6242 ಜನರಿಗೆ ಗರ್ಭಕಂಠದ ಕ್ಯಾನ್ಸರ್ ಪರೀಕ್ಷೆ ಮಾಡಲಾಗಿದೆ. 9599 ಜನರಿಗೆ ನೇತ್ರ ಪರೀಕ್ಷೆ ಮಾಡಲಾಗಿದ್ದು, 10839 ಜನರಿಗೆ ಕ್ಷಯರೋಗದ ಪರೀಕ್ಷೆ ಮಾಡಲಾಗಿದೆ ಹಾಗೂ 7092 ಜನರಿಗೆ ಕುಷ್ಠರೋಗ ಪರೀಕ್ಷೆ ಕೈಗೊಳ್ಳಾಗಿದೆ. 4130 ಜನರಿಗೆ ಕುಟುಂಬ ಕಲ್ಯಾಣದ ವಿಧಾನಗಳ ಸೇವೆಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.

ಶಿಬಿರಗಳಲ್ಲಿ ಇ-ಸಂಜೀವಿನಿ ಆಪ್ ಮೂಲಕ ತಜ್ಞ ವೈದ್ಯರನ್ನು ಯಾವುದೇ ಹಣದ ವೆಚ್ಚವಿಲ್ಲದೆ 11615 ಜನ ಸಂಪರ್ಕಿಸಿದ್ದಾರೆ. ಶಿಬಿರದಲ್ಲಿ 9326 ಜನರಿಗೆ ಆಯುಷ್ ಪದ್ದತಿ ಸೇವೆ ನೀಡಲಾಗಿದೆ. ಮೇಳಗಳಲ್ಲಿ 1493 ಆಹಾರ ಪರೀಕ್ಷೆಗಳನ್ನು ಕೈಗೊಳ್ಳಲಾಗಿದೆ. ರಾಷ್ಟ್ರೀಯ ಲಸಿಕೆ ಕಾರ್ಯಕ್ರಮದಡಿ 3383 ಮಕ್ಕಳಿಗೆ ಲಸಿಕೆಯನ್ನು ಹಾಕಲಾಗಿದೆ. ಶಿಬಿರಗಳಲ್ಲಿ 4396 ಆಯುಷ್ಮಾನ ಭಾರತ್ ಕಾರ್ಡ್‍ಗಳನ್ನು ಸೃಜನೆ ಮಾಡಲಾಗಿದೆ ಮತ್ತು 21555 ಜನರಿಗೆ ಆಭಾ ಕಾರ್ಡ್ ರಚಿಸಲಾಗಿದೆ. ಅಭಿಯಾನಡಿಯಲ್ಲಿ 95 ಉಚಿತ ರಕ್ತದಾನ ಶಿಬಿರಗಳನ್ನು ಏರ್ಪಡಿಸಿ 3811 ರಕ್ತ ಯುನಿಟ್ ರಕ್ತ ಸಂಗ್ರಹಿಸಲಾಗಿದೆ ಎಂದು ವಿವರಿಸಿದ್ದಾರೆ.

ಆಯುಷ್ಮಾನ್ ಭಾರತ ಹೆಲ್ತ್ ಅಕೌಂಟ್ ಮಾಡಿಸುವ ಮೂಲಕ ದೇಶದ ಯಾವುದೇ ಭಾಗದಲ್ಲಿ ಚಿಕಿತ್ಸೆಗೆ ತೆರಳಿದರೂ ಸಹ ಸಕಾಲದಲ್ಲಿ ಚಿಕಿತ್ಸೆಯನ್ನು ನೀಡಲು ಸಹಕಾರಿಯಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ತಪ್ಪದೇ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ವಿನಂತಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...