ಇಂದು ಭಾರತದ ಹೆಮ್ಮೆಯ ಪುತ್ರ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ 8 ನೇ ಪುಣ್ಯ ಸ್ಮರಣೆ ದಿನ. ಅವರ ಸರಳತೆ ಹಾಗೂ ಸಜ್ಜನಿಕೆಗೆ ಆನೇಕ ಉದಾಹರಣೆಗಳಿವೆ. ಅವರು ಸಮಾರಂಭ ಒಂದಕ್ಕೆ ತೆರಳಿದ್ದ ವೇಳೆ ಕುರ್ಚಿ ಮೇಲೆ ಕೂರಲು ನಿರಾಕರಿಸಿದ್ದೂ ಅವರ ಸರಳತೆಯ ಸಾವಿರಾರು ನಿದರ್ಶನಗಳ ಪೈಕಿ ಒಂದು.
ಅಬ್ದುಲ್ ಕಲಾಂ ಅವರು ವಾರಣಾಸಿಯ ಐಐಟಿ ಘಟಿಕೋತ್ಸವಕ್ಕೆ ತೆರಳಿದ್ದ ಸಂದರ್ಭ. ವಿದ್ಯಾರ್ಥಿಗಳ ಕಾರ್ಯಕ್ರಮವೆಂದರೇ ಎಂದಿಗೂ ಮಿಸ್ ಮಾಡದ ಕಲಾಂ ಸರ್, ಈ ಕಾರ್ಯಕ್ರಮಕ್ಕೂ ಹೋಗಿದ್ದರು. ವೇದಿಕೆ ಮೇಲೆ ಐದು ಕುರ್ಚಿಗಳನ್ನು ಇರಿಸಲಾಗಿತ್ತು. ಇವುಗಳ ಪೈಕಿ ಅಬ್ದುಲ್ ಕಲಾಂ ಅವರಿಗೆ ಮೀಸಲಾಗಿದ್ದ ಕುರ್ಚಿ ಇತರೆ ಕುರ್ಚಿಗಳಿಗಿಂತ ದೊಡ್ಡದಾಗಿತ್ತು. ಅಬ್ದುಲ್ ಕಲಾಂ ಅವರ ಸ್ಥಾನಮಾನಕ್ಕೆ ಗೌರವ ಸೂಚಿಸಲು ಐಐಟಿ ಅಧಿಕಾರಿಗಳು ಈ ವ್ಯವಸ್ಥೆ ಮಾಡಿದ್ದರು.
ವೇದಿಕೆ ಏರಿದ ಅಬ್ದುಲ್ ಕಲಾಂ ಅವರಿಗೆ ಈ ಭಿನ್ನತೆ ಗೋಚರಿಸಿತು. ತಾವು ಆ ಕುರ್ಚಿ ಮೇಲೆ ಕೂರುವುದಿಲ್ಲವೆಂದು ಹೇಳಿದ ಅವರು, ವಿಶ್ವವಿದ್ಯಾನಿಲಯದ ಕುಲಪತಿಗಳು ಅಲ್ಲಿ ಕೂರುವಂತೆ ಹೇಳಿದರು.
ಅಬ್ದುಲ್ ಕಲಾಂ ಅವರಂತ ಮೇರು ವ್ಯಕ್ತಿಯ ಮುಂದೆ ತಾವು ದೊಡ್ಡ ಕುರ್ಚಿ ಮೇಲೆ ಕುಳಿತುಕೊಳ್ಳಲು ಕಸಿವಿಸಿಗೊಂಡ ಕುಲಪತಿಗಳು ಬಳಿಕ ದೊಡ್ಡ ಕುರ್ಚಿಯನ್ನು ತೆಗೆಸಿ ಈ ಮೊದಲು ಹಾಕಲಾಗಿದ್ದ 4 ಕುರ್ಚಿಗಳಂತದ್ದೇ ಮತ್ತೊಂದು ಕುರ್ಚಿಯನ್ನು ಹಾಕಿಸಬೇಕಾಯಿತು. ಇದು ಕಲಾಂ ಅವರ ಸರಳತೆ ಹಾಗೂ ಸಜ್ಜನಿಕೆಯನ್ನು ತೋರಿಸುತ್ತದಲ್ಲದೇ ಇಂತಹ ಘಟನೆಗಳು ಜನಮಾನಸದಲ್ಲಿ ಅವರು ಚಿರಸ್ಥಾಯಿಯಾಗಿ ಉಳಿಯಲು ಕಾರಣವಾಗಿವೆ.