ಸೆಲ್ಫಿ ತೆಗೆದುಕೊಂಡು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಮೂಲಕ ಲೈಕ್ಸ್, ಕಮೆಂಟ್ ಗಿಟ್ಟಿಸಲು ಅನೇಕರು ಹಾತೊರೆಯುತ್ತಾರೆ. ಹೀಗೆ ಅಪಾಯಕಾರಿ ರೀತಿಯಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಕೆಲವರು ಪ್ರಾಣಕ್ಕೂ ಸಂಚಕಾರ ತಂದುಕೊಂಡಿರುವ ಘಟನೆಗಳು ನಡೆದಿವೆ. ಆದರೆ ಇದೊಂಥರ ಡಿಫರೆಂಟ್ ಸ್ಟೋರಿ. ಓದಿದವರ ಮೊಗದಲ್ಲಿ ಮಂದಹಾಸ ಮೂಡದೆ ಇರಲಾರದು.
ಹೌದು, ಇಂತಹದೊಂದು ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದ್ದು, ದೇಶದ ವಿವಿಧ ರಾಜ್ಯಗಳಲ್ಲಿ ಅತಿ ವೇಗವಾಗಿ ಚಲಿಸುವ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ ನೀಡಿರುವುದು ನಿಮಗೆ ಗೊತ್ತಿದೆ. ಇದು ಹೈಟೆಕ್ ಮಾದರಿಯಲ್ಲಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಹೀಗೆ ನಿಲ್ದಾಣದಲ್ಲಿ ಬಂದು ನಿಂತಿದ್ದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ಹತ್ತಿ ಸೆಲ್ಫಿ ತೆಗೆದುಕೊಳ್ಳಲು ಹೋದವನು ಪಡಬಾರದ ಪಾಡು ಪಟ್ಟಿದ್ದಾನೆ.
ರಾಜಮಂಡ್ರಿಯಲ್ಲಿ ರೈಲು ನಿಂತಿದ್ದ ವೇಳೆ ಇದಕ್ಕೆ ಹತ್ತಿದ ವ್ಯಕ್ತಿಯೊಬ್ಬ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾನೆ. ಸೆಲ್ಫಿ ತೆಗೆದುಕೊಂಡು ಬಳಿಕ ಕೆಳಗಿಳಿಯುವ ಇರಾದೆಯನ್ನು ಆತ ಹೊಂದಿದ್ದ. ಆದರೆ ಅವನ ಗ್ರಹಚಾರ ಕೆಟ್ಟಿತ್ತು ಅಂತ ಕಾಣಿಸುತ್ತೆ. ಈತ ಸೆಲ್ಫಿ ತೆಗೆದುಕೊಳ್ಳುವ ಸಂಭ್ರಮದಲ್ಲಿರುವಾಗಲೇ ಸ್ವಯಂ ಚಾಲಿತ ಬಾಗಿಲು ಬಂದ್ ಆಗಿದೆ.
ಇದರಿಂದ ಕಂಗಾಲದ ವ್ಯಕ್ತಿ ಬಾಗಿಲು ತೆರೆಯುವಂತೆ ಟಿಕೆಟ್ ಕಲೆಕ್ಟರ್ ಬಳಿ ಗೋಗರೆದಿದ್ದಾನೆ. ಆದರೆ ಇದಕ್ಕೆ ಸ್ಪಂದಿಸದ ಅವರು, ಮುಂದಿನ ನಿಲ್ದಾಣ ಬರುವವರೆಗೂ ಬಾಗಿಲು ತೆಗೆಯಲು ಆಗುವುದಿಲ್ಲ. ಹೀಗಾಗಿ ರೈಲು ವಿಶಾಖಪಟ್ಟಣದಲ್ಲಿ ನಿಂತ ಬಳಿಕ ಇಳಿ ಎಂದು ತಿಳಿಸಿದ್ದಾರೆ. ಅನಿವಾರ್ಯವಾಗಿ ಈ ಸೆಲ್ಫಿ ಪ್ರಿಯ ರಾಜಮಂಡ್ರಿಯಿಂದ 160 ಕಿಲೋ ಮೀಟರ್ ದೂರದಲ್ಲಿರುವ ವಿಶಾಖಪಟ್ಟಣಕ್ಕೆ ಪ್ರಯಾಣಿಸಿದ್ದು, ಅಲ್ಲಿ ಇಳಿದುಕೊಂಡಿದ್ದಾನೆ. ಈತನಿಗೆ ಯಾವುದೇ ದಂಡ ವಿಧಿಸದೆ ಪ್ರಯಾಣದ ದರವನ್ನು ಮಾತ್ರ ಪಡೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.