ರಾಜ್ಯದಲ್ಲಿ ಈ ಬಾರಿ ವ್ಯಾಪಕ ಮುಂಗಾರು ಮಳೆಯಾಗದ ಕಾರಣ ಬರ ಪರಿಸ್ಥಿತಿ ತಲೆದೋರಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಬಂದೊದಗುವ ಆತಂಕ ಎದುರಾಗಿದ್ದು, ಇದರ ಮಧ್ಯೆ ಮತ್ತೊಂದು ಶಾಕಿಂಗ್ ಸಂಗತಿ ಇಲ್ಲಿದೆ.
ಈ ಬಾರಿ ಮಳೆ ಕೊರತೆ ಆಗಿರುವ ಕಾರಣಕ್ಕೆ ಶರಾವತಿ ಕಣಿವೆ ವ್ಯಾಪ್ತಿಯ ಜಲಾಶಯಗಳು ಶೇಕಡ 48 ಮಾತ್ರ ಭರ್ತಿಯಾಗಿದೆ ಎಂದು ಹೇಳಿರುವ ಕೆಪಿಸಿ ವಿದ್ಯುತ್ ವಿಭಾಗದ ಮುಖ್ಯ ಇಂಜಿನಿಯರ್ ನಾರಾಯಣ ಪಿ. ಗಜಕೋಶ, ಹೀಗಾಗಿ ಲೋಡ್ ಶೆಡ್ಡಿಂಗ್ ಅನಿವಾರ್ಯ ಎಂದು ತಿಳಿಸಿದ್ದಾರೆ.
ಶುಕ್ರವಾರದಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗ್ ಫಾಲ್ಸ್ ನಲ್ಲಿ ಪದವೀಧರ ಮತ್ತು ಡಿಪ್ಲೋಮಾ ಎಂಜಿನಿಯರ್ಸ್ ಗಳ ಸಂಘ ಆಯೋಜಿಸಿದ್ದ ಎಂಜಿನಿಯರ್ಸ್ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಮುಂಗಾರು ಮಳೆಯ ಮಾರುತ ಮುಕ್ತಾಯದ ಹಂತದಲ್ಲಿರುವ ಕಾರಣ ಜಲಾಶಯಗಳು ತುಂಬುವುದು ಕಷ್ಟ ಸಾಧ್ಯ. ಜಲ ವಿದ್ಯುತ್ ಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಲೋಡ್ ಶೆಡ್ಡಿಂಗ್ ಈಗಾಗಲೇ ಆರಂಭವಾಗಿದೆ ಎಂದು ಹೇಳಿದ್ದಾರೆ.