ಬೆಂಗಳೂರು: ರಾಜ್ಯ ಸರ್ಕಾರವು ಮಹಿಳೆಯರಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಸ್ತ್ರೀಶಕ್ತಿ ಸಂಘಟನೆಗಳಿಗೆ 2 ಲಕ್ಷ ರೂ. ವರೆಗೆ ಬಡ್ಡಿ ರಹಿತ ಸಾಲ ಸೌಲಭ್ಯ ಒದಗಿಸಲಿದೆ.
ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ರಾಜ್ಯ ಸರ್ಕಾರವು ಮಹಿಳಾ ಕಲ್ಯಾಣ ಕಾರ್ಯಕ್ರಮಗಳಿಗೆ 70,427 ಕೋಟಿ ಹಣವನ್ನು ಮೀಸಲಿಟಿದೆ. ರಾಜ್ಯದ ಒಟ್ಟು 1 ಲಕ್ಷದ 65 ಸಾವಿರ ಸ್ತ್ರೀ ಶಕ್ತಿ ಗುಂಪುಗಳಿಗೆ ತಲಾ 25 ಸಾವಿರ ರೂ. ಆವರ್ತ ನಿಧಿ, ಸ್ತ್ರೀ ಶಕ್ತಿ ಸಂಘಟನೆಗಳಿಗೆ 2 ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲ ಸೌಲಭ್ಯ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕಾರ್ ತಿಳಿಸಿದ್ದಾರೆ.
ಮಹಿಳೆಯರ ಸ್ವಾವಲಂಬಿ ಬದುಕಿಗೆ ನಮ್ಮ ಸರ್ಕಾರವು ಬೆಂಬಲವಾಗಿ ನಿಂತಿದ್ದು, ಸ್ತ್ರೀಶಕ್ತಿ ಸಂಘಗಳ ಮೂಲಕ ನೆರವು ಪಡೆದ ಮಹಿಳೆಯರು ಗುಡಿ ಕೈಗಾರಿಕೆ, ಕಸೂತಿ, ಚಿಕ್ಕಪುಟ್ಟ ವ್ಯಾಪಾರ ವಹಿವಾಟು ಸೇರಿದಂತೆ ಆದಾಯ ಬರುವ ವೃತ್ತಿಯಲ್ಲಿ ತೊಡಗಿಸಿಕೊಂಡು ಕೌಟುಂಬಿಕ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಸ್ತ್ರೀ ಶಕ್ತಿ ಆರಾಧನೆಯ ಈ ನವರಾತ್ರಿಯ ಶುಭ ಸಂದರ್ಭದಲ್ಲಿ ನಮ್ಮ ಸರ್ಕಾರವು ಮಹಿಳಾ ಸಬಲೀಕರಣಕ್ಕೆ ಬದ್ಧವಾಗಿದ್ದು, ಮಹಿಳೆಯರ ಏಳಿಗೆಗಾಗಿ ಹಗಲಿರುಳು ಶ್ರಮಿಸುತ್ತಿದೆ ಎಂದು ಹೇಳಿದ್ದಾರೆ.