ʼಕೌನ್ ಬನೇಗಾ ಕರೋಡ್ಪತಿʼ 16 ರ ವಿಶೇಷ ಸಂಚಿಕೆಯಲ್ಲಿ, ಬಿಗ್ ಬಿ ಅಮಿತಾಬ್ ಬಚ್ಚನ್ 26/11 ಮುಂಬೈ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಸಾವನ್ನಪ್ಪಿದವರಿಗೆ ಗೌರವ ಸಲ್ಲಿಸಿದ್ದಾರೆ.
ಆ ಕರಾಳ ದಿನದಂದು ಪ್ರಾಣ ಕಳೆದುಕೊಂಡ ಅಮಾಯಕರಿಗೆ ಪ್ರಾರ್ಥನೆ ಸಲ್ಲಿಸಿದ್ದು, ಈ ಸಂಚಿಕೆಯಲ್ಲಿ ಅಂದಿನ ಮುಂಚೂಣಿ ಯೋಧ ವಿಶ್ವಾಸ್ ನಂಗ್ರೆ ಪಾಟೀಲ್, ಮಹಾರಾಷ್ಟ್ರದ ಭ್ರಷ್ಟಾಚಾರ ನಿಗ್ರಹ ದಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸಂಜಯ್ ಗೋವಿಲ್ಕರ್ ಹಾಟ್ ಸೀಟ್ ಅಲಂಕರಿಸಿದ್ದರು.
ದಾಳಿಯ ಸಂದರ್ಭದಲ್ಲಿ ದಕ್ಷಿಣ ಮುಂಬೈನ ವಲಯ-1 ರ ಉಪ ಪೊಲೀಸ್ ಆಯುಕ್ತರಾಗಿ (ಡಿಸಿಪಿ) ಸೇವೆ ಸಲ್ಲಿಸಿದ್ದ ವಿಶ್ವಾಸ್ ನಂಗ್ರೆ ಪಾಟೀಲ್, ಸುಕೃತಿ ಮಾಧವ್ ಅವರ ʼಮೈ ಖಾಖೀ ಹೂಂʼ ಎಂಬ ಕವಿತೆಯನ್ನು ಓದುವ ಮೂಲಕ ಸಂಚಿಕೆಯನ್ನು ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಅವರು ಆ ದುರದೃಷ್ಟಕರ ದಿನದಂದು ಪ್ರಾಣ ಕಳೆದುಕೊಂಡವರ ದುರಂತದ ಕಥೆಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಆತಿಥೇಯ ಅಮಿತಾಬ್ ಬಚ್ಚನ್, “ನಾನು ಎದ್ದು ನಿಂತು ನಿಮಗೆ ನಮನ ಸಲ್ಲಿಸಲು ಬಯಸುತ್ತೇನೆ” ಎಂದರು.
ಭಯೋತ್ಪಾದನಾ ದಾಳಿಯ ಘಟನೆಗಳನ್ನು ವಿವರಿಸಿದ ವಿಶ್ವಾಸ್ ಜಿ, “ಆಗಿನ ಪ್ರಧಾನಿ ಮನಮೋಹನ್ ಸಿಂಗ್, 28 ರಂದು ಮುಂಬೈಗೆ ಕಾರ್ಯಕ್ರಮಕ್ಕೆ ಬರಲಿದ್ದರು. ನಾನು ಆಗಷ್ಟೇ ಮುಂಬೈನಲ್ಲಿ ನಿಯೋಜಿತನಾಗಿದ್ದೆ ಮತ್ತು ನನ್ನ ಹೆಂಡತಿ ನನಗೆ ಊಟವನ್ನು ಬಡಿಸುತ್ತಿದ್ದಳು. ನಾನು ಇನ್ನೂ ಸಮವಸ್ತ್ರದಲ್ಲಿಯೇ ಇದ್ದೆ. ನನ್ನ ರಾತ್ರಿಯ ರೌಂಡ್ 12 ಗಂಟೆಗೆ ಪ್ರಾರಂಭವಾಗಲಿದ್ದು, ಈ ವೇಳೆ ಲಿಯೋಪೋಲ್ಡ್ ಕೆಫೆಗೆ ಧಾವಿಸುವಂತೆ ನನಗೆ ಕರೆ ಬಂದಿತ್ತು.
ನನ್ನ ಚಾಲಕ ಕೆಳಗಡೆ ಇದ್ದು, ನಾನು ಅವನಿಗೆ ಸೂಚನೆ ನೀಡುತ್ತಿದ್ದಂತೆ, ತಾಜ್ ಹೋಟೆಲ್‌ನಲ್ಲಿನ ಪರಿಸ್ಥಿತಿಯ ಬಗ್ಗೆ ನನಗೆ ಮತ್ತೊಂದು ಕರೆ ಬಂತು, ಅಲ್ಲಿ ಗ್ರೆನೇಡ್ ಸ್ಫೋಟ ಮತ್ತು ಎಕೆ -47 ಗುಂಡಿನ ಸದ್ದು ಕೇಳಿಬಂದಿತ್ತು. ಇದು ಭಯೋತ್ಪಾದಕ ದಾಳಿ ಎಂದು ತ್ವರಿತವಾಗಿ ಸ್ಪಷ್ಟವಾಯಿತು ಮತ್ತು ನಾನು ತಾಜ್‌ಗೆ ಹೋಗಲು ನಿರ್ಧರಿಸಿದೆ. ಆ ವೇಳೆಗಾಗಲೇ ಉಗ್ರರು 11 ಮಂದಿಯನ್ನು ಕೊಂದಿದ್ದು ಹಲವರು ಗಾಯಗೊಂಡಿದ್ದರು. ಪ್ರವೇಶ ದ್ವಾರದಲ್ಲಿ ಗೇಟ್ ಇದ್ದು, ಗಾಜಿನ ಗೇಟ್ ಬದಲಿಗೆ ಕಬ್ಬಿಣದ ಗ್ರಿಲ್ ಹಾಕುವಂತೆ ಈ ಹಿಂದೆ ಸೂಚಿಸಿದ್ದೆ ಆದರೆ ಪಾರಂಪರಿಕ ತಾಣವಾಗಿರುವ ಕಾರಣ ಸಾಧ್ಯವಾಗಿರಲಿಲ್ಲ. ವಿಪರ್ಯಾಸವೆಂದರೆ, ಭಯೋತ್ಪಾದಕರು ಒಳ ಪ್ರವೇಶಿಸಲು ಆ ಗೇಟ್ ಅನ್ನು ಮುರಿದಿದ್ದರು” ಎಂದು ಹೇಳಿದರು.
ಆಗ ಅಮಿತಾಭ್ ಬಚ್ಚನ್ “ನಿಮ್ಮ ತಂಡದ ಅನೇಕ ಸದಸ್ಯರು ಕ್ರಾಸ್‌ಫೈರ್‌ನಲ್ಲಿ ಹುತಾತ್ಮರಾಗಿದ್ದಾರೆ ಮತ್ತು ಅನೇಕ ಸಾರ್ವಜನಿಕರು ಜೀವ ಕಳೆದುಕೊಂಡಿದ್ದಾರೆ ಎಂದು ನನಗೆ ತಿಳಿದಿದೆ. ಇದು ನಿಜಕ್ಕೂ ಹೃದಯ ವಿದ್ರಾವಕವಾಗಿದೆ. ನೀವು ಅದರ ಬಗ್ಗೆ ಮಾತನಾಡುವುದನ್ನು ಕೇಳಿದರೆ ನಮಗೆ ನಡುಕವಾಗುತ್ತದೆ ಎಂದರು.