ಬಂಗಾರದ ಬೆಲೆ ದಿನೇ ದಿನೇ ಏರುತ್ತಲೇ ಇದೆ. ಸದ್ಯ ಚಿನ್ನದ ಬೆಲೆ 10 ಗ್ರಾಂಗೆ 63060 ರೂಪಾಯಿಗೆ ತಲುಪಿದೆ. ಡಿಸೆಂಬರ್ 4 ರಂದು ಚಿನ್ನವು 2023ರ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿತ್ತು. ಅಂದು ಬೆಲೆ 10 ಗ್ರಾಂಗೆ 64063 ರೂಪಾಯಿ ಆಗಿತ್ತು. 2023 ರಲ್ಲಿ ಚಿನ್ನವು ಶೇ.15 ಕ್ಕಿಂತ ಹೆಚ್ಚು ಆದಾಯವನ್ನು ನೀಡಿದೆ. ಚಿನ್ನದ ಈ ನಿರಂತರ ಏರಿಕೆಯು 2024 ರಲ್ಲೂ ಮುಂದುವರಿಯುವ ನಿರೀಕ್ಷೆಯಿದೆ. ಮಾರುಕಟ್ಟೆ ತಜ್ಞರ ಪ್ರಕಾರ 2024ರಲ್ಲಿ ಚಿನ್ನದ ಬೆಲೆ 70,000 ರೂಪಾಯಿ ದಾಟಬಹುದು.
ರೂಪಾಯಿ ಸ್ಥಿರತೆ, ಭೌಗೋಳಿಕ ರಾಜಕೀಯ ಅನಿಶ್ಚಿತತೆ ಮತ್ತು ನಿಧಾನಗತಿಯ ಜಾಗತಿಕ ಆರ್ಥಿಕ ಬೆಳವಣಿಗೆಯ ಪರಿಣಾಮವು ಚಿನ್ನದ ಮೇಲೆ ಗೋಚರಿಸುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್, US ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಮೃದುಗೊಳಿಸುವ ಸೂಚನೆಗಳು ಮತ್ತು ಹಣದುಬ್ಬರದ ಕುಸಿತದ ಸೂಚನೆಗಳೊಂದಿಗೆ ಬಡ್ಡಿದರಗಳನ್ನು ಯಥಾಸ್ಥಿತಿಯಲ್ಲಿ ಇರಿಸಿದೆ.
ಅದೇ ಸಮಯದಲ್ಲಿ ಹಣದುಬ್ಬರ ದರಗಳ ಕುಸಿತವು ಮುಂದಿನ ದಿನಗಳಲ್ಲಿ ಬಡ್ಡಿದರಗಳನ್ನು ಕಡಿತಗೊಳಿಸುವ ನಿರೀಕ್ಷೆ ಹುಟ್ಟಿಸಿದೆ. ಈ ಬದಲಾವಣೆಗಳು ಅಮೆರಿಕದ ಬಾಂಡ್ ಯೀಲ್ಡ್‌ನಲ್ಲಿ ಮತ್ತಷ್ಟು ಕುಸಿತವನ್ನು ಉಂಟುಮಾಡುತ್ತವೆ. ಇದು ಚಿನ್ನದ ದರದ ಮೇಲೆ ಪರಿಣಾಮ ಬೀರಲಿದೆ.
ಜಾಗತಿಕ ಒತ್ತಡದ ಪರಿಣಾಮ
ರಷ್ಯಾ-ಉಕ್ರೇನ್ ಯುದ್ಧ, ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧ, ಜಾಗತಿಕ ಆರ್ಥಿಕತೆಯ ಮೇಲೆ ಹೆಚ್ಚುತ್ತಿರುವ ಒತ್ತಡದಿಂದಾಗಿ ಏಷ್ಯಾದಲ್ಲಿ ಚಿನ್ನದ ಬೆಲೆ ಏರಿಕೆಯಾಗುವ ಲಕ್ಷಣಗಳು ಕಂಡುಬರುತ್ತಿವೆ. ಅಂತರಾಷ್ಟ್ರೀಯ ಹಣಕಾಸು ನಿಧಿ (IMF) ಪ್ರಕಾರ, ಪ್ರಮುಖ ಕೇಂದ್ರೀಯ ಬ್ಯಾಂಕ್‌ಗಳ ಬಡ್ಡಿದರಗಳ ನಿರಂತರ ಹೆಚ್ಚಳದಿಂದಾಗಿ ಜಾಗತಿಕ ಆರ್ಥಿಕ ಬೆಳವಣಿಗೆಯು ನಿಧಾನಗೊಳ್ಳುವ ಸಾಧ್ಯತೆಯಿದೆ. ಇಂತಹ ಪರಿಸ್ಥಿತಿಯಲ್ಲಿ ಸದಾ ಸುರಕ್ಷಿತ ಹೂಡಿಕೆ ಎಂದೇ ಪರಿಗಣಿತವಾಗಿರುವ ಚಿನ್ನದತ್ತ ಹೂಡಿಕೆದಾರರ ಆಕರ್ಷಣೆ ಹೆಚ್ಚಾಗಬಹುದು.
ಯುದ್ಧ ಮತ್ತು ಜಾಗತಿಕ ಅಸ್ಥಿರತೆಯ ಮಧ್ಯೆ ಚಿನ್ನವು ಸುರಕ್ಷಿತ ಆಸ್ತಿಯಾಗಿ ಬಲವನ್ನು ಪಡೆಯುತ್ತದೆ. ಮಾರುಕಟ್ಟೆ ತಜ್ಞರ ಪ್ರಕಾರ 2024 ರಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ 2400 ಡಾಲರ್‌ಗೆ ತಲುಪಬಹುದು. ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 70,000 ರೂಪಾಯಿ ದಾಟುವ ಸಾಧ್ಯತೆ ಇದೆ.