ತಮ್ಮ ವಿಶಿಷ್ಟ ಹಾಗೂ ವಿನೂತನ ವಾಸ್ತುಶೈಲಿಯಿಂದಾಗಿ ಗೂಗಲ್ ಕಚೇರಿಗಳು ಜಗತ್ತಿನಾದ್ಯಂತ ಸುದ್ದಿ ಮಾಡುತ್ತವೆ. ತನ್ನ ಉದ್ಯೋಗಿಗಳು ಖುಷಿಯಾಗಿ ಕೆಲಸ ಮಾಡಲೆಂದು ಆವಿಷ್ಕಾರಿಯಾಗಿ, ವಿನೂತನ ಥೀಂಗಳಲ್ಲಿ ತನ್ನ ಕಚೇರಿಗಳನ್ನು ವಿನ್ಯಾಸ ಮಾಡುತ್ತದೆ ಗೂಗಲ್.
ಗೂಗ್ಲರ್‌ಗಳು ಎಂದು ಕರೆಯಲಾಗುವ ಸಂಸ್ಥೆಯ ಉದ್ಯೋಗಿಗಳಿಗೆ ಕಚೇರಿಯಲ್ಲಿ ಅದ್ಭುತ ಎನಿಸುವಷ್ಟು ಐಷಾರಾಮಿ ಸವಲತ್ತುಗಳು ಸಿಗುತ್ತವೆ. ಉಚಿತ ಆಹಾರ, ನಿದ್ರೆ ಕೋಣೆಗಳು, ಮನರಂಜನೆ ಪ್ರದೇಶಗಳು ಸೇರಿದಂತೆ ನಾವು ಊಹೆ ಮಾಡುವುದೆಲ್ಲವನ್ನೂ ಗೂಗಲ್ ಆಫೀಸ್‌ಗಳು ಒಳಗೊಂಡಿರುತ್ತವೆ.
ಗೂಗಲ್‌ನ ಕೊಲರಾಡೋ ಕಚೇರಿಯಲ್ಲಿ ಉದ್ಯೋಗದಲ್ಲಿರುವ ಸೀನಿಯರ್ ಸಲ್ಯೂಷನ್ಸ್ ಕನ್ಸಲ್ಟೆಂಟ್ ಆದ್ಯಾ ಕುಂಚಾಲ್ ಇತ್ತೀಚೆಗೆ ಕಂಪನಿಯ ಗುರುಗ್ರಾಮದ ಕಚೇರಿಗೆ ಭೇಟಿ ಕೊಟ್ಟಿದ್ದ ವೇಳೆಯ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. “ಗೂಗಲ್ ಇಂಡಿಯಾ ಅಮೆರಿಕದಲ್ಲಿರುವಷ್ಟೇ ಅನುಕೂಲಗಳನ್ನು ಒಳಗೊಂಡಿದೆಯೇ?” ಎಂದು ಪ್ರಶ್ನಿಸುತ್ತಲೇ ಗುರುಗ್ರಾಮದ ಕಚೇರಿಯ ಪ್ರವಾಸ ಮಾಡಿಸುತ್ತಾರೆ ಆದ್ಯಾ.
ಗುರುಗ್ರಾಮದಲ್ಲಿರುವ ಗೂಗಲ್ ಕಚೇರಿಯಲ್ಲಿ ದಿನವಿಡೀ ಟೀ, ಕಾಫಿ, ಫ್ರಶ್ ಆಗಿ ಗ್ರಿಲ್ ಮಾಡಲಾದ ಸ್ಯಾಂಡ್‌ವಿಚ್‌ಗಳು ಹಾಗೂ ತಿಂಡಿಗಳನ್ನು ಪೂರೈಸುವ ಕೆಫೆ ಇದ್ದು, ಅಂಥ ಸೌಲಭ್ಯ ಅಮೆರಿಕದಲ್ಲಿ ಇಲ್ಲವೆಂದು ಆದ್ಯ ಹೇಳುತ್ತಾರೆ.
“ಗುರುಗ್ರಾಮ, ಭಾರತ, ಗೂಗಲ್ ಕಚೇರಿಗೆ ಭೇಟಿ ಕೊಟ್ಟಿದ್ದೆ. ಜಾಗತಿಕ ಮಟ್ಟದಲ್ಲಿ ಒಂದೇ ಮಟ್ಟದ ಕೆಲಸದ ಸಂಸ್ಕೃತಿ ಹೊಂದಿರುವ ಗೂಗಲ್ ಎಲ್ಲೆಡೆ ಒಂದೇ ಮಟ್ಟದಲ್ಲಿ ಸೌಲಭ್ಯಗಳನ್ನು ಒದಗಿಸುತ್ತಿರುವುದನ್ನು ಕಂಡು ಖುಷಿಯಾಯಿತು,” ಎಂದು ತಮ್ಮ ಪೋಸ್ಟ್‌ಗೆ ಕ್ಯಾಪ್ಷನ್ ಕೊಟ್ಟಿದ್ದಾರೆ.
https://youtu.be/Sv01uLuVt-g