ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ಫೆಬ್ರವರಿ 13 ರಿಂದ 17 ರವರೆಗೆ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯಲಿದ್ದು, ಪ್ರದರ್ಶನ ವೀಕ್ಷಿಸಲು ತೆರಳುವ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬಿಎಂಟಿಸಿ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಿದೆ.
ಸಾರ್ವಜನಿಕರಿಗೆ ವೈಮಾನಿಕ ಪ್ರದರ್ಶನ ವೀಕ್ಷಣೆಗೆ ಫೆಬ್ರವರಿ 16 ಮತ್ತು 17 ರಂದು ಅವಕಾಶವಿದ್ದು, ಬಿಎಂಟಿಸಿ ವಿಶೇಷ ಸಾರಿಗೆ ಸೌಲಭ್ಯ ಕಲ್ಪಿಸಿದೆ. ಫೆಬ್ರವರಿ 16 ಮತ್ತು 17ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಸಾರ್ವಜನಿಕರಿಗೆ ವೈಮಾನಿಕ ಪ್ರದರ್ಶನ ನಡೆಯಲಿದೆ.
ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಬೆಂಗಳೂರಿನ ವಿವಿಧ ಭಾಗಗಳಿಂದ ಪ್ರದರ್ಶನ ನಡೆಯುವ ಸ್ಥಳಕ್ಕೆ ಹೆಚ್ಚುವರಿ ಬಸ್ ಗಳನ್ನು ಕಾರ್ಯಾಚರಣೆಗಿಳಿಸಲಾಗುವುದು. ಕೆಂಪೇಗೌಡ ಬಸ್ ನಿಲ್ದಾಣ, ಕೆಆರ್ ಮಾರುಕಟ್ಟೆ ಬಸ್ ನಿಲ್ದಾಣ, ಶಿವಾಜಿನಗರ ನಿಲ್ದಾಣ, ಹೆಬ್ಬಾಳ ರಿಂಗ್ ರಸ್ತೆ ಜಂಕ್ಷನ್, ಬನಶಂಕರಿ ಟಿಟಿಎಂಸಿ, ಕೆಂಗೇರಿ, ಟಿನ್ ಫ್ಯಾಕ್ಟರಿ, ಯಶವಂತಪುರದಿಂದ ಬಸ್ ಗಳು ಸಂಚರಿಸಲಿದ್ದು, ಸಾಮಾನ್ಯ ಬಸ್ ಗಳ ಟಿಕೆಟ್ ದರ 30 ರಿಂದ 45 ರೂಪಾಯಿ ನಿಗದಿಪಡಿಸಲಾಗಿದೆ.