
ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣದ ವೇಳೆ ಅನಾನುಕೂಲತೆ ಉಂಟಾಗಿದ್ದಕ್ಕೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅಸಮಾಧಾನ ವ್ಯಕ್ತಪಡಿಸಿದ್ದು, ಮುರಿದ ಸೀಟು ನೀಡಿದ ಟಾಟಾ ಒಡೆತನದ ಏರ್ ಇಂಡಿಯಾ ಸಂಸ್ಥೆ ವಿರುದ್ಧ ಕಿಡಿಕಾರಿದ್ದಾರೆ.
ಇತ್ತೀಚಿಗೆ ದೆಹಲಿಯಿಂದ ಬಿಹಾರದ ಪೂಸಾಗೆ ಏರ್ ಇಂಡಿಯಾ ವಿಮಾನದಲ್ಲಿ ಕೃಷಿ ಸಚಿವ ಶಿವರಾಜ್ ಸಿಂಗ್ ಪ್ರಯಾಣ ಬೆಳೆಸಿದ್ದರು. ಕೇಂದ್ರ ಸಚಿವರಿಗೆ ಮುರಿದಿದ್ದ 8ಸಿ ಸಂಖ್ಯೆಯ ಆಸನ ನೀಡಲಾಗಿತ್ತು. ಪ್ರಯಾಣಿಕರಿಂದ ಪೂರ್ಣ ಟಿಕೆಟ್ ದರ ಪಡೆದುಕೊಂಡು ಮುರಿದ ಸೀಟು ನೀಡುವುದು ಮೋಸವಲ್ಲವೇ ಎಂದು ಸಚಿವರು ಪ್ರಶ್ನಿಸಿದ್ದಾರೆ.
ವಿಮಾನದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ಇದೇನಾ ಪ್ರಯಾಣಿಕರಿಗೆ ನೀಡುವ ಸೇವೆ ಎಂದು ಪ್ರಶ್ನಿಸಿದ್ದಾರೆ. ಕೆಲವು ಪ್ರಯಾಣಿಕರು ಸೀಟ್ ಬದಲಾವಣೆ ಮಾಡಿಕೊಳ್ಳಲು ಸಚಿವರಿಗೆ ಮನವಿ ಮಾಡಿದ್ದು, ಆದರೆ ಒಪ್ಪದ ಸಚಿವರು ಮುರಿದ ಸೀಟಿನಲ್ಲಿಯೇ ಪ್ರಯಾಣ ಮುಂದುವರೆಸಿದ್ದಾರೆ.
ಕೇಂದ್ರ ಸಚಿವರ ಪ್ರಯಾಣದ ವೇಳೆ ಉಂಟಾದ ಅನಾನುಕೂಲತೆಗೆ ಏರ್ ಇಂಡಿಯಾ ಕ್ಷಮೆಯಾಚಿಸಿದೆ. ನಿಮಗೆ ಉಂಟಾದ ತೊಂದರೆಗೆ ಕ್ಷಮೆ ಕೋರುತ್ತೇವೆ. ಮುಂದೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸುತ್ತೇವೆ. ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ನೀಡಲು ಕ್ರಮ ಕೈಗೊಳ್ಳುತ್ತೇವೆ ಎಂದು ಏರ್ ಇಂಡಿಯಾ ಆಡಳಿತ ಮಂಡಳಿ ತಿಳಿಸಿದೆ.