ಕಣ್ಣೂರು(ಕೇರಳ): ಮಸ್ಕತ್‌ನಿಂದ ಕಣ್ಣೂರಿಗೆ ಸುಮಾರು ಒಂದು ಕಿಲೋಗ್ರಾಂ ಚಿನ್ನವನ್ನು ತನ್ನ ಗುದನಾಳದಲ್ಲಿ ಬಚ್ಚಿಟ್ಟು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇಲೆ ಗಗನಸಖಿಯೊಬ್ಬಳನ್ನು ಬಂಧಿಸಲಾಗಿದೆ ಎಂದು ಡಿಆರ್‌ಐ ಮೂಲಗಳು ಇಂದು ತಿಳಿಸಿವೆ.
ಡಿಆರ್‌ಐ ಕೊಚ್ಚಿನ್‌ನ ನಿರ್ದಿಷ್ಟ ಗುಪ್ತಚರ ಆಧಾರದ ಮೇಲೆ, ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‌ಐ – ಕಣ್ಣೂರು) ಅಧಿಕಾರಿಗಳು ಮೇ 28 ರಂದು ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಸ್ಕತ್‌ನಿಂದ ಆಗಮಿಸಿದ ಕೋಲ್ಕತ್ತಾ ಮೂಲದ ಸುರಭಿ ಖಾತುನ್ ಎಂಬ ಕ್ಯಾಬಿನ್ ಸಿಬ್ಬಂದಿಯನ್ನು ತಡೆದರು. ಆಕೆಯನ್ನು ತಪಾಸಣೆಗೊಳಪಡಿಸಿದಾಗ ಆಕೆಯ ಗುದನಾಳದಲ್ಲಿ ಬಚ್ಚಿಟ್ಟಿದ್ದ ಸಂಯುಕ್ತ ರೂಪದಲ್ಲಿದ್ದ 960 ಗ್ರಾಂ ಕಳ್ಳಸಾಗಣೆ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ವಿಚಾರಣೆ ಮತ್ತು ಅಗತ್ಯ ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ನಂತರ, ಆಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು ಮತ್ತು ಕಣ್ಣೂರಿನ ಮಹಿಳಾ ಕಾರಾಗೃಹಕ್ಕೆ 14 ದಿನಗಳವರೆಗೆ ರಿಮಾಂಡ್ ನೀಡಲಾಗಿದೆ.
ಗುದನಾಳದಲ್ಲಿ ಚಿನ್ನವನ್ನು ಬಚ್ಚಿಟ್ಟು ಕಳ್ಳಸಾಗಣೆ ಮಾಡುತ್ತಿದ್ದ ವಿಮಾನಯಾನ ಸಿಬ್ಬಂದಿಯನ್ನು ಬಂಧಿಸಿದ ಭಾರತದಲ್ಲಿ ಇದು ಮೊದಲ ಪ್ರಕರಣವಾಗಿದೆ ಎಂದು ಮೂಲಗಳು ಹೇಳಿವೆ.
ಪ್ರಕರಣದ ಬಗ್ಗೆ ವಿಸ್ತೃತ ತನಿಖೆ ಆರಂಭವಾಗಿದ್ದು, ಇಲ್ಲಿಯವರೆಗೆ ಸಂಗ್ರಹಿಸಿದ ಸಾಕ್ಷ್ಯಾಧಾರಗಳ ಪ್ರಕಾರ ಆಕೆ ಈ ಹಿಂದೆ ಹಲವು ಬಾರಿ ಚಿನ್ನ ಕಳ್ಳಸಾಗಣೆ ಮಾಡಿದ್ದಾಳೆ. ಸ್ಮಗ್ಲಿಂಗ್ ಗ್ಯಾಂಗ್‌ನಲ್ಲಿ ಕೇರಳ ಮೂಲದ ವ್ಯಕ್ತಿಗಳು ಭಾಗಿಯಾಗಿರುವ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಈ ಕುರಿತು ವಿಮಾನಯಾನ ಸಂಸ್ಥೆ ಇನ್ನೂ ಪ್ರತಿಕ್ರಿಯಿಸಿಲ್ಲ.