ಈ ಹಿಂದೆ ಪ್ರಧಾನ ಮಂತ್ರಿ ಉಜ್ವಲಾ ಯೋಜನೆ ಫಲಾನುಭವಿಗಳಿಗೆ ಸಿಲಿಂಡರ್ ಖರೀದಿ ಮೇಲೆ 200 ರೂಪಾಯಿ ಸಬ್ಸಿಡಿ ನೀಡಿದ್ದ ಕೇಂದ್ರ ಸರ್ಕಾರ ದಸರಾ ಹಾಗೂ ದೀಪಾವಳಿ ಹಬ್ಬ ಸಮೀಪಿಸುತ್ತಿರುವ ಸಂದರ್ಭದಲ್ಲಿ ಬುಧವಾರದಂದು ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದೆ.
ಬುಧವಾರದಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ , ಉಜ್ವಲಾ ಯೋಜನೆ ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್ ಗೆ ನೀಡಲಾಗುತ್ತಿದ್ದ ಸಬ್ಸಿಡಿ ಮೊತ್ತವನ್ನು 200 ರೂಪಾಯಿಗಳಿಂದ 300 ರೂಪಾಯಿಗಳಿಗೆ ಏರಿಕೆ ಮಾಡಲಾಗಿದ್ದು, ಈ ನಿಯಮ ತಕ್ಷಣದಿಂದಲೇ ಜಾರಿಗೆ ಬಂದಿದೆ.
14.2 ಕೆಜಿ ಸಿಲಿಂಡರ್ ಗೆ ಮಾರುಕಟ್ಟೆ ದರ 903 ರೂಪಾಯಿಗಳಿದ್ದು, 200 ರೂಪಾಯಿ ಸಬ್ಸಿಡಿ ಕಾರಣಕ್ಕೆ ಉಜ್ವಲಾ ಫಲಾನುಭವಿಗಳಿಗೆ ಇದು 703 ರೂಪಾಯಿಗಳಿಗೆ ಲಭ್ಯವಾಗುತ್ತಿತ್ತು. ಇದೀಗ ಸಬ್ಸಿಡಿ ಮೊತ್ತವನ್ನು ಮತ್ತೆ 100 ರೂಪಾಯಿ ಏರಿಕೆ ಮಾಡುವುದರ ಮೂಲಕ ಒಟ್ಟು ಸಬ್ಸಿಡಿ 300 ರೂಪಾಯಿಗಳಾಗಿದೆ. ಹೀಗಾಗಿ ಇನ್ನು ಮುಂದೆ ಉಜ್ವಲಾ ಯೋಜನೆಯ ಫಲಾನುಭವಿಗಳು 14.2 ಕೆಜಿ ತೂಕದ ಸಿಲಿಂಡರ್ ಗೆ 603 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.