ಸಾಂಕ್ರಾಮಿಕ ರೋಗವಾದ ಆಫ್ರಿಕನ್ ಹಂದಿ ಜ್ವರವು ಕೇರಳದ ಕೊಟ್ಟಾಯಂ ಜಿಲ್ಲೆಯ ಎರಡು ಗ್ರಾಮಗಳಲ್ಲಿ ವರದಿಯಾಗಿದೆ ಎನ್ನಲಾಗಿದ್ದು, ಕೂಟ್ಟಿಕಲ್ ಮತ್ತು ವಝೂರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಂದಿ ಸಾಕಾಣಿಕೆ ಕೇಂದ್ರಗಳಲ್ಲಿ ಇದು ಪತ್ತೆಯಾಗಿದೆ ಎಂದು ಅಧಿಕಾರಿಗಳು ಶುಕ್ರವಾರದಂದು ಮಾಹಿತಿ ನೀಡಿದ್ದಾರೆ.
ಈ ಹಿನ್ನಲೆಯಲ್ಲಿ ರೋಗ ಹರಡುವುದನ್ನು ನಿಯಂತ್ರಿಸಲು ಕೊಟ್ಟಾಯಂ ಜಿಲ್ಲಾಧಿಕಾರಿ ಜಾನ್ ವಿ ಸ್ಯಾಮ್ಯುಯೆಲ್ ಅವರು ಪೀಡಿತ ಪ್ರದೇಶದಲ್ಲಿನ ಎಲ್ಲಾ ಹಂದಿಗಳನ್ನು ಕೊಲ್ಲಲು ಆದೇಶಿಸಿದ್ದಾರೆ.
“ಬಾಧಿತ ಪ್ರದೇಶಗಳಲ್ಲಿ ಮತ್ತು ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಎಲ್ಲಾ ಹಂದಿಗಳನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಕೊಂದು ವಿಲೇವಾರಿ ಮಾಡಲಾಗುವುದು” ಎಂದು ಸ್ಯಾಮ್ಯುಯೆಲ್ ಹೇಳಿದ್ದು, ಜಿಲ್ಲಾ ಪಶುಸಂಗೋಪನೆ ಅಧಿಕಾರಿಗಳು ಈ ಪ್ರಕ್ರಿಯೆಯ ಮೇಲ್ವಿಚಾರಣೆ ಮಾಡುತ್ತಾರೆ.
ಸೋಂಕು ಕಂಡುಬಂದ ಪ್ರದೇಶದ ಒಂದು ಕಿಲೋಮೀಟರ್ ವ್ಯಾಪ್ತಿಯ ಪ್ರದೇಶವನ್ನು ಸೋಂಕಿತ ವಲಯ ಎಂದು ಘೋಷಿಸಲಾಗಿದ್ದು, ಈ ಪ್ರದೇಶದ ಸುತ್ತಲಿನ 10 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಣ್ಗಾವಲು ಮಾಡಲಾಗುತ್ತದೆ. ಮುನ್ನೆಚ್ಚರಿಕೆಯಾಗಿ, ಈ ಪ್ರದೇಶಗಳಿಂದ ಹಂದಿಮಾಂಸ, ಹಂದಿಗಳು ಅಥವಾ ಆಹಾರದ ಮಾರಾಟ, ವಿತರಣೆ ಮತ್ತು ಸಾಗಣೆಯನ್ನು ನಿಷೇಧಿಸಲಾಗಿದೆ.